
Wedding: ಮದುವೆಯಾದ 7 ದಿನದ ಬಳಿಕ ನಗದು, ಚಿನ್ನದೊಂದಿಗೆ ಪರಾರಿಯಾದ ನವವಧು
Team Udayavani, May 30, 2023, 3:37 PM IST

ಕಾನ್ಪುರ: ಸೋನಮ್ ಕಪೂರ್ ಅವರ ʼಡಾಲಿ ಕಿ ಡೋಲಿʼ ಸಿನಿಮಾವನ್ನು ನೀವು ನೋಡಿರಬಹುದು. ನವ ವಧುವೊಬ್ಬಳು ನಗದು, ಚಿನ್ನಾಭರಣದೊಂದಿಗೆ ಪರಾರಿಯಾಗುವ ಕಥೆಯನ್ನೊಳಗೊಂಡ ಸಿನಿಮಾವದು. ಅಂಥದ್ದೇ ಘಟನೆ ಕಾನ್ಪುರದಲ್ಲಿ ನಡೆದಿದೆ.
ಉತ್ತರ ಪ್ರದೇಶದ ನಿರಾಲಾ ನಗರದ ನಿವಾಸಿ ರಾಮ್ ಕರಣ್ ಅವರ ವಿವಾಹ ಇತ್ತೀಚೆಗೆ ನೇರವೇರಿದೆ. ಸ್ಥಳೀಯ ಏಜೆಂಟ್ ವೊಬ್ಬರಿಗೆ 70 ಸಾವಿರ ರೂ.ವನ್ನು ಕೊಟ್ಟ ಬಳಿಕ ರಾಮ್ ಕರಣ್ ಅವರಿಗೆ ಒಂದೊಳ್ಳೆ ಸಂಬಂಧವನ್ನು ಹುಡುಕಿದ್ದರು.
ಅದರಂತೆ ಬಿಹಾರದ ಹುಡುಗಿಯೊಂದಿಗೆ ಮೇ 15 ರಂದು, ಧರ್ಮಗಢ್ ಬಾಬಾ ದೇವಸ್ಥಾನದಲ್ಲಿ ವಿವಾಹವನ್ನು ನೆರವೇರಿಸಲಾಯಿತು. ಆ ಬಳಿಕ ತನ್ನ ಪತ್ನಿಯೊಂದಿಗೆ ಗ್ರಾಮಕ್ಕೆ ರಾಮ್ ಕರಣ್ ಬಂದಿದ್ದಾರೆ. ಮೇ.23 ರಂದು ಬೆಳಗ್ಗೆ ಎದ್ದು ನೋಡುವಾಗ ತನ್ನ ಪತ್ನಿ ಮನೆಯಲ್ಲಿ ಇಲ್ಲದಿರುವುದು ಹಾಗೂ 50 ಸಾವಿರ ನಗದು, ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ನಗದು ಮತ್ತು ಚಿನ್ನಾಭರಣ ಪತ್ನಿಗೆ ಗಂಡನ ಕಡೆಯಿಂದ ಬಂದ ಉಡುಗೊರೆ ಆಗಿತ್ತು.
ಮದುವೆಯಾದ 7 ದಿನದ ಬಳಿಕ ಪತ್ನಿ ನಗದು ಹಾಗೂ ಚಿನ್ನಾಭರಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ ಎಂದು ಪತಿ ರಾಮ್ ಕರಣ್ ದೂರು ನೀಡಿದ್ದಾರೆ. ಸದ್ಯ ನವವಧುವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಜೈಪುರದಲ್ಲಿ ಮದುವೆ ದಿನವೇ ವಧು ಓಡಿ ಹೋಗಿರುವ ಘಟನೆ ನಡೆದಿತ್ತು. ವಧುವಿಗಾಗಿ ವರ 13 ದಿನ ಮಂಟಪದಲ್ಲೇ ಕಾದು ಕುಳಿತು, ಅದೇ ವಧುವನ್ನು ಮದುವೆಯಾಗಿದ್ದ.
ಟಾಪ್ ನ್ಯೂಸ್
