
ಪ್ರಯಾಸವಾಯಿತೇ ಪ್ರಯೋಗ.. : ಐಪಿಎಲ್ ಚಾಂಪಿಯನ್ ರೋಹಿತ್ ನಾಯಕತ್ವಕ್ಕೆ ಏನಾಗಿದೆ?
ಬಿಸಿಸಿಐ ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿಯನ್ನು ಕೆಳಕ್ಕಿಳಿಸಿತು. ಕಾರಣ ಬೇರೆ ನೀಡಿತ್ತು, ಅದು ಇಲ್ಲಿ ಅಪ್ರಸ್ತುತ.
Team Udayavani, Sep 8, 2022, 5:45 PM IST

ಎಕ್ಸಪರಿಮೆಂಟ್, ಎಕ್ಸಪರಿಮೆಂಟ್, ಎಕ್ಸಪರಿಮೆಂಟ್.. ಪ್ರಯೋಗ ಒಳ್ಳೆಯದೆ. ಆದರೆ ಅತಿಯಾದರೆ ಏನಾಗುತ್ತದೆ ಎನ್ನುವುದಕ್ಕೆ ಟೀಂ ಇಂಡಿಯಾದ ಸದ್ಯದ ಪರಿಸ್ಥಿತಿ ಉತ್ತಮ ಉದಾಹರಣೆ. ಪಂದ್ಯಕ್ಕೊಂದರಂತೆ ಪ್ರಯೋಗ ಮಾಡುತ್ತಾ ಹೋದ ರೋಹಿತ್ – ರಾಹುಲ್ ಜೋಡಿ ಇದೀಗ ಮುಖಭಂಗ ಅನುಭವಿಸಿದೆ.
2021ರ ಟಿ20 ವಿಶ್ವಕಪ್ ಬಳಿಕ ಮೂರು ಮಾದರಿ ನಾಯಕರಾಗಿದ್ದ ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ‘ನಾನಿನ್ನು ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ಇರುತ್ತೇನೆ’ ಎಂದು ಬಿಟ್ಟರು. ಆದರೆ ಇದು ಬಿಸಿಸಿಐ ಬಿಗ್ ಬಾಸ್ ಗಳಿಗೆ ರುಚಿಸಲಿಲ್ಲ. ತಂಡದ ನಾಯಕ ತಮಗಿಂತ ಮೇಲೇರುವುದನ್ನು ಬಿಸಿಸಿಐ ಎಂದೂ ಒಪ್ಪಲ್ಲ. ಇಲ್ಲೂ ಅದೇ ಆಯಿತು. ಏಕದಿನ ಟೆಸ್ಟ್ ಗೆ ನಾಯಕನಾಗಿ ‘ಇರುತ್ತೇನೆ’ ಎಂದು ಅದು ಹೇಗೆ ವಿರಾಟ್ ಹೇಳಿದ ಎಂದ ಬಿಸಿಸಿಐ ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿಯನ್ನು ಕೆಳಕ್ಕಿಳಿಸಿತು. ಕಾರಣ ಬೇರೆ ನೀಡಿತ್ತು, ಅದು ಇಲ್ಲಿ ಅಪ್ರಸ್ತುತ.
ಕೊಹ್ಲಿ ನಾಯಕತ್ವದಲ್ಲಿ ಒಂದು ಮ್ಯಾಚ್ ಸೋತಾಗಲೂ ರೋಹಿತ್ ಶರ್ಮಾರನ್ನೇ ಕ್ಯಾಪ್ಟನ್ ಮಾಡಬೇಕು ಎಂದು ಆಗ್ರಹಿಸುತ್ತಿದ್ದ ಐಪಿಎಲ್ ಅಭಿಮಾನಿಗಳಿಗೆ ಬಲ ಬಂದಿತ್ತು. ರೋಹಿತ್ ಐದು ಬಾರಿ ಐಪಿಎಲ್ ಕಪ್ ಗೆದ್ದಿದ್ದಾರೆ, ಟೀಂ ಇಂಡಿಯಾ ಪರ ನಿದಹಾಸ್ ಟ್ರೋಫಿ ಗೆದ್ದಿದ್ದಾರೆ, ಕೊಹ್ಲಿ ಏನು ಒಂಬತ್ತು ವರ್ಷ ಕ್ಯಾಪ್ಟನ್ ಆದರೂ ಒಮ್ಮೆಯೂ ಆರ್ ಸಿಬಿಗೆ ಕಪ್ ಗೆದ್ದುಕೊಟ್ಟಿಲ್ಲ ಎನ್ನುವವರು ರೋಹಿತ್ ಗೆ ಜಯಕಾರ ಹಾಕಿದ್ದರು. ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕನಾಗಿದ್ದರು.
ಇತ್ತ ವಿರಾಟ್ ಕೊಹ್ಲಿ ನಾಯಕತ್ವ ಕೊನೆಗಂಡಂತೆ, ಅತ್ತ ಕೋಚ್ ಆಗಿದ್ದ ರವಿ ಶಾಸ್ತ್ರಿ ಜವಾಬ್ದಾರಿ ಕೂಡಾ ಮುಗಿದಿತ್ತು. ಜೂನಿಯರ್ ಕ್ರಿಕೆಟ್ ಕೋಚಿಂಗ್ ನಲ್ಲಿ ಉತ್ತಮ ಸಾಧನೆ ಮಾಡಿದ್ದ ರಾಹುಲ್ ದ್ರಾವಿಡ್ ಗೆ ಸೀನಿಯರ್ ಟೀಮ್ ಕೋಚ್ ಜವಾಬ್ದಾರಿ ನೀಡಲಾಯಿತು. ಇದಾಗಿ ಕೆಲ ದಿನಗಳಲ್ಲಿ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸಿದರು. ಅಲ್ಲಿಗೆ ತಂಡಕ್ಕೆ ಹೊಸ ಕೋಚ್ ಮತ್ತು ಹೊಸ ಕ್ಯಾಪ್ಟನ್ ಸಿಕ್ಕಿದ್ದರು. ಅಲ್ಲಿಂದ ಎಕ್ಸಪರಿಮೆಂಟ್ ಯುಗ ಆರಂಭ.
ಸರಣಿಗೊಬ್ಬ ನಾಯಕ, ಪ್ರವಾಸಕ್ಕೊಂದು ತಂಡ. ಒಂದು ಪಂದ್ಯ ಆಡಿದಾತ ಮತ್ತೊಂದು ಪಂದ್ಯದಲ್ಲಿ ಆಡುತ್ತಾನೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ತಂಡದ ಪ್ರಮುಖ ಆಟಗಾರರು ಫಿಟ್ ಆಗಿ ಆಡಲು ಸಿದ್ದರಿದ್ದರೂ, ಹೊಸ ಆಟಗಾರರಿಗೆ ಅವಕಾಶ. ಕಳೆದ ಆರರಿಂದ ಏಳು ತಿಂಗಳುಗಳಿಂದ, ಒಂದೇ ತಂಡವು (ಎಲ್ಲಾ ಪ್ಲೇಯಿಂಗ್ 11 ಸದಸ್ಯರೊಂದಿಗೆ) ಸತತ ಎರಡು ಪಂದ್ಯಗಳನ್ನು ಆಡಿರುವುದು ಬಹಳ ವಿರಳ. ರೋಹಿತ್ ಶರ್ಮಾ-ದ್ರಾವಿಡ್ ಜೋಡಿಯ ದೊಡ್ಡ ಸಾಧನೆಗಳಲ್ಲಿ ಒಂದು ಈ ಆರೇಳು ತಿಂಗಳುಗಳ ಅವಧಿಯಲ್ಲಿ ಭಾರತ ತಂಡವನ್ನು ಆರು ನಾಯಕರು ಮುನ್ನಡೆಸಿದ್ದು.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಗೆಲುವು ಸಾಧಿಸಿಲ್ಲ ನಿಜ. ಆದರೆ ಪ್ರದರ್ಶನ ಮಾತ್ರ ತೀರಾ ಕಳಪೆ ಎಂದೂ ಆಗಿರಲಿಲ್ಲ. ಇಂಗ್ಲೆಂಡ್ ನಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಕೂಡಾ ಭಾರತ ತಂಡ ಸೆಮಿ ಫೈನಲ್ ಪ್ರವೇಶ ಮಾಡಿತ್ತು. ಆದರೆ ಆ ಅರ್ಧ ಗಂಟೆಯ ಕೆಟ್ಟ ಆಟದ ಕಾರಣದಿಂದ ಹೊರ ಬೀಳಬೇಕಾಯಿತು. ಚೊಚ್ಚಲ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಗೇರಿತ್ತು. ಇಂಗ್ಲೆಂಡ್ ನಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲಲು ಸರ್ವ ಸನ್ನದ್ಧವಾಗಿತ್ತು.
ಆದರೆ ಸದ್ಯ ಭಾರತ ತಂಡವು ಪಾಕ್- ಶ್ರೀಲಂಕಾ ವಿರುದ್ಧ ಸೋತು ಏಷ್ಯಾಕಪ್ ನಿಂದ ಹೊರ ಬಿದ್ದಿದೆ. ಅದೂ ಅಫ್ಘಾನಿಸ್ಥಾನದಂತಹ ತಂಡ ಕೂಟದಲ್ಲಿ ಅವಕಾಶ ಹೊಂದಿರುವಂತೆ. ಸದ್ಯದ ಭಾರತ ಟೆಸ್ಟ್ ತಂಡ ಟೆಸ್ಟ್ ಚಾಂಪಿಯನ್ ಶಿಪ್ ರಾಂಕಿಂಗ್ ನ ಮಧ್ಯದಲ್ಲಿದೆ. ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಅವಕಾಶವೂ ಕೈಚೆಲ್ಲಿದೆ.
ವಿರಾಟ್- ಶಾಸ್ತ್ರಿ ಜೋಡಿ ದೊಡ್ಡ ಕಪ್ ಗೆದ್ದಿಲ್ಲದೆ ಇರಬಹುದು. ಆದರೆ ಈ ಸಮಯದಲ್ಲಿ ಭಾರತ ತಂಡ ಅತ್ಯಂತ ಬಲಿಷ್ಠವಾಯಿತು. ಬ್ಯಾಟಿಂಗ್ ಬಲ ಹೊಂದಿದ್ದ ತಂಡವಾಗಿದ್ದ ಭಾರತ ಬೌಲಿಂಗ್ ನಲ್ಲೂ ಬಲಿಯಿತು. ಸ್ಪಿನ್ ಬೌಲಿಂಗ್ ನ ತಂಡದ ಪೇಸ್ ಬೌಲಿಂಗ್ ನ ಪ್ರದರ್ಶನ ಹೆಚ್ಚಿಸುವಂತೆ ಮಾಡಿತ್ತು ಈ ಕಾಲ. ಯಾವುದೇ ದೇಶದಲ್ಲಿ, ಯಾವುದೇ ಪರಿಸ್ಥಿತಿಯಲ್ಲಿ ಭಾರತ ತಂಡ ಗೆಲ್ಲುತ್ತದೆ ಎಂದು ಅಭಿಮಾನಿಗಳಿಗೂ ನಂಬಿಕೆ ಬರುವಂತೆ ಮಾಡಿದ್ದು ಕೊಹ್ಲಿ – ಶಾಸ್ತ್ರಿ ಜೋಡಿ.
ಸದ್ಯ ಭಾರತ ತಂಡದ ಪ್ರದರ್ಶನ ವೇಗಕ್ಕೆ ಸದ್ಯ ಪ್ರಯೋಗ ಕಡಿವಾಣ ಹಾಕುತ್ತಿದೆ. ಪಾಕ್ ವಿರುದ್ಧ ಉತ್ತಮ ಬಾಲ್ ಹಾಕಿದ ರವಿ ಬಿಷ್ಣೋಯಿ ಲಂಕಾ ವಿರುದ್ಧ ಬೆಂಚ್ ಕಾದಿದ್ದಾರೆ. ಏಷ್ಯಾ ಕಪ್ ನಂತಹ ಟೂರ್ನಿಗೆ ಭಾರತ ತಂಡ ಕೇವಲ ಮೂವರು ವೇಗಿಗಳೊಂದಿಗೆ ತೆರಳಿದೆ. ಅದರಲ್ಲಿ ಒಬ್ಬ ಹುಷಾರು ತಪ್ಪಿದರೆ ಮತ್ತೆ ವೇಗಿಗಳಿಲ್ಲ. ಇಲ್ಲೂ ಅದೇ ಆಗಿದ್ದು, ಆವೇಶ್ ಖಾನ್ ಇಲ್ಲದ ಕಾರಣ ಭುವನೇಶ್ವರ್ ಮತ್ತು ಅರ್ಶದೀಪ್ ಮಾತ್ರ ವೇಗಿಗಳಾಗಿ ಆಡಿದರು. ಹಾರ್ದಿಕ್ ಪಾಂಡ್ಯ ಏನಿದ್ದರೂ ಆಲ್ ರೌಂಡರ್ ಆಯ್ಕೆ.
ಲಂಕಾ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ನಾಯಕ ಶರ್ಮಾ, ‘ಮುಂದಿನ ಟಿ20 ವಿಶ್ವಕಪ್ ಗೆ ಸುಮಾರು ಶೇಕಡಾ 90ರಿಂದ 95 ತಂಡ ಸಿದ್ದವಾಗಿದೆ. ಮುಂದಿನ ಎರಡು ಸರಣಿಯಲ್ಲಿ (ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ) ಮತ್ತಷ್ಟು ಪ್ರಯೋಗ ಮಾಡುತ್ತೇವೆ. ಅಲ್ಲಿಂದ ಕೆಲವರನ್ನು ಆಯ್ಕೆ ಮಾಡುತ್ತೇವೆ’ ಎಂದಿದ್ದಾರೆ.
ಏಷ್ಯಾ ಕಪ್ ನಲ್ಲಿ ನಾಯಕ ರೋಹಿತ್ ವರ್ತನೆಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಮೈದಾನದಲ್ಲೇ ಆಟಗಾರರ ಮೇಲೆ ಎಗರಾಡುವುದು, ಕ್ಯಾಮರಾ ಎದುರುಗಡೆ ಕೂಗಾಡುವುದರಿಂದ ಯುವ ಆಟಗಾರರ ಆತ್ಮಸ್ಥೈರ್ಯ ಕುಗ್ಗುವಂತೆ ಮಾಡುತ್ತದೆ. ವಿರಾಟ್ ಎಷ್ಟೇ ಅಗ್ರೆಸಿವ್ ಇದ್ದರೂ ಸಹ ಆಟಗಾರರ ಮೇಲೆ ರೇಗುತ್ತಿರಲಿಲ್ಲ ಎನ್ನುತ್ತಾರೆ ಅಭಿಮಾನಿಗಳು.
ಪ್ರಯೋಗಗಳು ಬೇಕು. ಆದರೆ ಮಿತಿಯಲ್ಲಿರಬೇಕು. ನಡೆಯುವವರು ಎಡವುದು ಸಹಜ. ಆದರೆ ಸದಾ ಎಡವುದೇ ನಡೆಯುವ ಲಕ್ಷಣವಲ್ಲ ಎಂಬ ಮಾತಿನಂತೆ, ರಾಹುಲ್- ರೋಹಿತ್ ಜೋಡಿ ತಂಡವನ್ನು ಸರಿ ದಾರಿಗೆ ತರಲಿ ಎನ್ನುವುದೇ ಆಶಯ.
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪೋಷಕಾಂಶ ಹಾಗೂ ಖನಿಜಾಂಶಗಳ ಆಗರ: ನಿತ್ಯ ಸಂಜೀವಿನಿ ಈ ಎಳನೀರು…

ಮೈಗ್ರೇನ್ ಎಂಬ ತಲೆಶೂಲೆ…ಇದರ ಲಕ್ಷಣಗಳೇನು? ಮೈಗ್ರೇನ್ಗೆ ಇದೆ ಮನೆ ಮದ್ದು

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ಬಾಯಲ್ಲಿ ಇಟ್ಟರೆ ಬೆಣ್ಣೆ ತರ ಕರಗುವ ಮೃದುವಾದ ಪೈನಾಪಲ್ ಕೇಸರಿಬಾತ್ ರೆಸಿಪಿ…

ಸ್ಕಾಲರ್ಶಿಪ್ಗಾಗಿ ಕ್ರಿಕೆಟ್ ತ್ಯಜಿಸಿ ಜಾವೆಲಿನ್ ತ್ರೋವರ್ ಆದ ಒಲಿಂಪಿಕ್ ಮೆಡಲಿಸ್ಟ್ ಕಥೆ…
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
