Temple Story: ಕಮಂಡಲ ಗಣಪತಿ ದೇವಸ್ಥಾನ.. ಇಲ್ಲಿನ ಪವಾಡಕ್ಕೆ ಇಲ್ಲಿಗೆ ಬರುವ ಭಕ್ತರೇ ಸಾಕ್ಷಿ
ಇದು ಬ್ರಾಹ್ಮೀ ನದಿಯ ಉಗಮ ಸ್ಥಾನವೂ ಹೌದು
ಸುಧೀರ್, Aug 5, 2024, 6:31 PM IST
ಹಚ್ಚ ಹಸುರಿನ ಕಾನನದ ನಡುವೆ ಸಾವಿರಾರು ವರ್ಷಗಳ ಇತಿಹಾಸವಿರುವ ಗಣಪತಿ ದೇವಾಲಯವೊಂದು ನೆಲೆ ನಿಂತಿದ್ದು ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಿದೆ. ಅದರಂತೆ ಅಸಂಖ್ಯಾತ ಭಕ್ತರು ತಮ್ಮ ದೋಷಗಳನ್ನು ನಿವಾರಣೆ ಮಾಡಿಕೊಳ್ಳಲು ಈ ಪುಣ್ಯ ಸ್ಥಳಕ್ಕೆ ಭೇಟಿ ನೀಡುತಿದ್ದಾರೆ. ಸಾಕಷ್ಟು ಜನರಿಗೆ ಈ ಸ್ಥಳದ ಪರಿಚಯ ಇಲ್ಲದಿದ್ದರೂ ಈ ದೇವಸ್ಥಾನದ ಹಿಂದಿರುವ ಶಕ್ತಿ ಮಾತ್ರ ಅಗಾಧವಾಗಿದೆ ಎನ್ನುತ್ತಾರೆ ಭಕ್ತರು. ಬನ್ನಿ ಹಾಗಾದರೆ ಈ ಶಕ್ತಿಶಾಲಿ ಗಣಪತಿ ದೇವಸ್ಥಾನ ಎಲ್ಲಿದೆ ಇದರ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಂಡು ಬರೋಣ…
ಎಲ್ಲಿದೆ ದೇವಸ್ಥಾನ:
ಶ್ರೀ ಕಮಂಡಲ ಗಣಪತಿ ದೇವಸ್ಥಾನವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಿಂದ 4 ಕಿಲೋಮೀಟರ್ ದೂರದಲ್ಲಿರುವ ಕೆಸವೆ ಎಂಬ ಪುಟ್ಟಗ್ರಾಮದಲ್ಲಿದೆ.
ದೇವಸ್ಥಾನದ ಇತಿಹಾಸ :
ದೇವಲೋಕದಲ್ಲಿರುವ ಪಾರ್ವತಿ ದೇವಿಗೆ ಒಮ್ಮೆ ಶನಿ ದೋಷ ಎದುರಾಗಿತ್ತಂತೆ. ಈ ವೇಳೆ ದೋಷ ಪರಿಹಾರ ಹೇಗೆಂದು ದೇವರು ಹಾಗೂ ದೇವಾನು ದೇವತೆಗಳಲ್ಲಿ ಕೇಳಿದಾಗ ಭೂಲೋಕಕ್ಕೆ ತೆರಳಿ ತಪಸ್ಸು ಮಾಡಿದರೆ ಶನಿ ದೋಷ ನಿವಾರಣೆ ಆಗುತ್ತದೆ ಎಂದು ಹೇಳುತ್ತಾರೆ. ಅದರಂತೆ ಪಾರ್ವತಿ ದೇವಿ ಭೂಲೋಕಕ್ಕೆ ಪ್ರಯಾಣ ಬೆಳೆಸಿ ಮೃಗವಧೆ ಎಂಬ ಸ್ಥಳದಲ್ಲಿ ತಪಸ್ಸು ಮಾಡುತ್ತಾಳೆ, ಇದಾದ ಬಳಿಕ ಅಗಸ್ತ್ಯ ಮಹರ್ಷಿಗಳ ವಿಚಾರ ತಿಳಿದು ಈಗಿರುವ ದೇವಾಲಯದ ಸ್ಥಳಕ್ಕೆ (ಕಮಂಡಲ ಗಣಪತಿ ದೇವಸ್ಥಾನ) ಬಂದು ಧ್ಯಾನದಲ್ಲಿ ಮಗ್ನಳಾಗಿ ಗಣೇಶನನ್ನು ಪ್ರತಿಷ್ಠಾಪಿಸಿ ಮತ್ತೆ ಧ್ಯಾನದಲ್ಲಿ ಮಗ್ನಳಾದ ಪಾರ್ವತಿ ಶನಿ ದೋಷದಿಂದ ಮುಕ್ತಳಾಗುತ್ತಾಳೆ. ಶನಿ ದೋಷ ಮುಕ್ತಳಾದ ಪಾರ್ವತಿ ದೇವಿ ತಾನು ಪ್ರತಿಷ್ಠಾಪಿಸಿದ ಗಣೇಶನಿಗೆ ಅಭಿಷೇಕ ಮಾಡಲು ನೀರು ತರಲು ಹೋಗುತ್ತಾಳೆ. ಆದರೆ ಪಾರ್ವತಿಗೆ ಎಲ್ಲೂ ನೀರು ಸಿಗುವುದಿಲ್ಲ. ಬಳಿಕ ನೀರಿಗಾಗಿ ಬ್ರಹ್ಮದೇವನಲ್ಲಿ ಬೇಡಿಕೊಳ್ಳುತ್ತಾಳೆ. ಈ ವೇಳೆ ಬ್ರಹ್ಮದೇವ ಪ್ರತ್ಯಕ್ಷಗೊಂಡು ಬಾಣವನ್ನು ಹೊಡೆದು ಕಮಂಡಲದಿಂದ ನೀರು ಚಿಮ್ಮುವಂತೆ ಮಾಡುತ್ತಾನೆ, ಹೀಗೆ ಚಿಮ್ಮಿದ ನೀರು ಮುಂದೆ ಬ್ರಾಹ್ಮೀ ನದಿಯಾಗಿ ಮಾರ್ಪಾಡುಗೊಳ್ಳುತ್ತದೆ. ಜೊತೆಗೆ ಈ ಸ್ಥಳವನ್ನು ಕಮಂಡಲ ಗಣಪತಿ ದೇವಸ್ಥಾನ ಎಂದು ಕರೆಯಲಾಯಿತು.
ತೀರ್ಥದಿಂದ ಮಕ್ಕಳ ಜ್ಞಾನ ವೃದ್ಧಿ, ಶನಿ ದೋಷ ನಿವಾರಣೆ :
ಗಣಪತಿ ದೇವಸ್ಥಾನದ ಗರ್ಭಗುಡಿಯಲ್ಲಿ ಉಗಮಗೊಂಡಿರುವ ಬ್ರಾಹ್ಮೀ ನದಿ ಹರಿದು ದೇವಸ್ಥಾನದ ಎದುರು ತೀರ್ಥ ರೂಪದಲ್ಲಿ ಬೀಳುತ್ತಂತೆ. ಈ ತೀರ್ಥದಲ್ಲಿ ಮಿಂದೆದ್ದರೆ ಶನಿ ದೋಷ ನಿವಾರಣೆಯಾಗುತ್ತದೆ ಎಂಬುದು ಭಕ್ತರ ಪ್ರತೀತಿ. ಹಾಗಾಗಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ತೀರ್ಥ ಸ್ನಾನ ಮಾಡಿ ವಿಘ್ನೇಶರನ ದರ್ಶನ ಪಡೆಯುತ್ತಾರೆ. ಅಷ್ಟು ಮಾತ್ರವಲ್ಲದೆ ಇಲ್ಲಿನ ತೀರ್ಥ ಮಕ್ಕಳಿಗೆ ಕುಡಿಸಿದರೆ ಅವರ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಭಕ್ತರು ಕಂಡುಕೊಂಡಿದ್ದಾರೆ, ಜೊತೆಗೆ ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ ಎಂದು ಭಕ್ತರು ಹೇಳುತ್ತಾರೆ.
ಯೋಗ ಮುದ್ರೆ ಗಣಪ:
ಈ ದೇವಸ್ಥಾನದಲ್ಲಿರುವ ಗಣಪತಿ ಮೂರ್ತಿಯ ವಿಶೇಷತೆ ಏನೆಂದರೆ ಯೋಗ ಮುದ್ರೆ ರೂಪದಲ್ಲಿರುವುದು ಅಂದರೆ ಯೋಗಕ್ಕೆ ಕೂತಿರೋ ಭಂಗಿಯಲ್ಲಿರುವುದು. ಈ ರೀತಿಯ ಮೂರ್ತಿ ಕಾಣಸಿಗುವುದು ಅತಿ ಅಪರೂಪ.
ವರ್ಷದ ಎಲ್ಲಾ ದಿನ ಚಿಮ್ಮುವ ತೀರ್ಥ:
ಗಣೇಶನ ಮೂರ್ತಿಯ ಎದುರು ಉದ್ಭವವಾಗುವ ಕಮಂಡಲ ತೀರ್ಥ ವರ್ಷವಿಡೀ ಚಿಮ್ಮುತ್ತದೆ ಎಂದು ದೇವಸ್ಥಾನದ ಅರ್ಚಕರು ಹೇಳುತ್ತಾರೆ, ಮಳೆಗಾಲದ ಸಮಯದಲ್ಲಿ ಕಮಂಡಲದ ನೀರು ಗಣೇಶ ವಿಗ್ರಹದ ಪದವನ್ನು ಸ್ಪರ್ಶಿಸುತ್ತದೆಯಂತೆ, ಅದೇ ಬೇಸಿಗೆ ಸಮಯದಲ್ಲಿ ಕಡಿಮೆ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ವರ್ಷದ ಎಲ್ಲ ದಿನಗಳು ಕಮಂಡಲದಿಂದ ತೀರ್ಥ ಚಿಮ್ಮುತ್ತಿರುತ್ತದೆ ಎನ್ನುತ್ತಾರೆ.
ಮಧ್ಯಾಹ್ನದ ಪೂಜೆಯ ಬಳಿಕ ಬಾಗಿಲು
ಭಕ್ತರು ಈ ದೇವಸ್ಥಾನಕ್ಕೆ ಬರುವುದಾದರೆ ಮಧ್ಯಾಹ್ನ 12 ಗಂಟೆ ಒಳಗೆ ಭೇಟಿ ನೀಡಬೇಕು. ತಡವಾದರೆ ದೇವರ ದರ್ಶನ ಭಾಗ್ಯ ಸಿಗುವುದಿಲ್ಲ. ಮಧ್ಯಾಹ್ನ 12 ಗಂಟೆಗೆ ಪೂಜೆ ನೆರವೇರುತ್ತದೆ. ಇದಾದ ಬಳಿಕ ದೇವಾಲಯವನ್ನು ಮುಚ್ಚಲಾಗುತ್ತದೆ. ಆದರೆ ವಿಶೇಷ ದಿನಗಳಲ್ಲಿ (ಸಂಕಷ್ಟಿ, ಗಣೇಶ ಚತುರ್ಥಿ) ದಿನದಂದು ಮಾತ್ರ ಇಲ್ಲಿ ರಾತ್ರಿ ವಿಶೇಷ ಪೂಜೆ ಇರುತ್ತದೆ. ಚೌತಿ ಸಮಯದಲ್ಲಿ ಸಾವಿರಾರು ಜನ ಇಲ್ಲಿಗೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ.
ಪೂಜಾ ಸಮಯ: ದೇವಸ್ಥಾನದಲ್ಲಿ ಬೆಳಿಗ್ಗೆ 7:30 ಕ್ಕೆ ಬೆಳಗಿನ ಪೂಜೆ ನಡೆಯುತ್ತದೆ. ಜೊತೆಗೆ ಮಧ್ಯಾಹ್ನ 12 ಗಂಟೆಗೆ ಮಧ್ಯಾಹ್ನದ ಪೂಜೆ ನಡೆಯುತ್ತದೆ ಬಳಿಕ ದೇವಸ್ಥಾನಕ್ಕೆ ಬಾಗಿಲು ಹಾಕುತ್ತಾರೆ.
ತಲುಪುವುದು ಹೇಗೆ:
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಸವೆ ಗ್ರಾಮದಲ್ಲಿರುವ ಶ್ರೀ ಕಮಂಡಲ ಗಣಪತಿ ದೇವಸ್ಥಾನಕ್ಕೆ ಕೊಪ್ಪದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಬಸ್ಸಿನಲ್ಲಿ ಬಂದವರು ಕೊಪ್ಪ ಬಸ್ ನಿಲ್ದಾಣದಿಂದ ರಿಕ್ಷಾ ಅಥವಾ ಕಾರಿನ ಮೂಲಕ ದೇವಸ್ಥಾನಕ್ಕೆ ತೆರಳಬಹುದು, ಸ್ವಂತ ವಾಹನದಲ್ಲಿ ಬಂದರೆ ದೇವಸ್ಥಾನದ ಹತ್ತಿರ ತನಕ ವಾಹನ ಸಂಚಾರವಿದೆ.
ಸುಧೀರ್ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.