
ಅಭ್ಯರ್ಥಿಗಳ “ಸಾಮಾಜಿಕ’ ಖಾತೆಗಳ ಮೇಲೆ ಕಣ್ಣು
Team Udayavani, Aug 21, 2018, 6:50 AM IST

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪಾಲಿನ “ಲೋಕಲ್ ಟೆಸ್ಟ್’ ಆಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಹದ್ದಿನ ಕಣ್ಣಿಟ್ಟಿರುವ ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಮಟ್ಟದಲ್ಲಿ ಮೂರು ಹಂತದ ಭದ್ರ ಜಾಲವೊಂದನ್ನು ಹಣೆದಿದೆ.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ನೀತಿ ಸಂಹಿತೆ ಜಾರಿ ಸಮಿತಿ, ವಾರ್ಡ್ ಮಟ್ಟದ ಚುನಾವಣಾ ವೆಚ್ಚ ವೀಕ್ಷಕರು, ಇವರ ಮೇಲೆ ನೋಡಲ್ ಅಧಿಕಾರಿ ಈ ರೀತಿಯ ಮೂರು ಹಂತದ ಜಾಲ ಚುನಾವಣಾ ವೆಚ್ಚದ ನಿಯಂತ್ರಣದ ಕೆಲಸ ಮಾಡಲಿದೆ.
ಈ ಜಾಲ ಅಭ್ಯರ್ಥಿಗಳ ಸಾಮಾನ್ಯ ಚುನಾವಣಾ ವೆಚ್ಚದ ಜತೆಗೆ ಅವರ ಫೇಸ್‌ಬುಕ್ ಖಾತೆ, ವಾಟ್ಸಪ್ ನಂಬರ್, ಮೊಬೈಲ್ ನಂಬರ್, ಈಮೇಲ್ ಐಡಿ ಸೇರಿದಂತೆ “ಸೋಶಿಯಲ್ ಮೀಡಿಯಾ ಅಕೌಂಟ್’ಗಳ ಮೇಲೂ ನಿಗಾ ಇರಿಸಲಿದೆ. ಇದೇ ಮೊದಲ ಬಾರಿಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವೆಚ್ಚದ ದೃಷ್ಟಿಯಿಂದ ಅಭ್ಯರ್ಥಿಗಳ ಸೋಶೀಯಲ್ ಮಿಡಿಯಾ ಅಕೌಂಟ್‌ಗಳ ಮೇಲೆ ನಿಗಾ ಇಡಲಾಗುತ್ತಿದೆ. ಈ ಹಿಂದೆ 2013 ಮತ್ತು 2014ರಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆದಾಗ ಸಾಮಾಜಿಕ ಜಾಲತಾಣಗಳ ಬಳಕೆ ಅಷ್ಟೊಂದು ವ್ಯಾಪಕವಾಗಿ ಇರಲಿಲ್ಲ.
ರಾಜ್ಯದ 21 ಜಿಲ್ಲೆಗಳ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಆ.31ರಂದು ಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಚಾರ ಚುರುಕುಗೊಂಡಿದೆ. ಜಿಲ್ಲಾ ಮಟ್ಟದ ಸಮಿತಿ ಮಾರ್ಗದರ್ಶನದಲ್ಲಿ ವಾರ್ಡ್ ಮಟ್ಟದ ವೆಚ್ಚ ವೀಕ್ಷಕರು ಅಭ್ಯರ್ಥಿಗಳ ಮೊಬೈಲ್ ನಂಬರ್, ವಾಟ್ಸಪ್ ನಂಬರ್, ಫೇಸ್‌ಬುಕ್, ಈಮೇಲ್ ಐಡಿಗಳ ಮೇಲೆ ಕಣ್ಣಿಟ್ಟು, ಬಲ್ಕ್ ಎಸೆಮ್ಮೆಸ್, ವಾಟ್ಸಪ್ ಗ್ರೂಪ್ ಮತ್ತು ಫೇಸ್‌ಬುಕ್ ಅಕೌಂಟ್‌ನ ಮೆಸೇಜ್‌ಗಳು, ವಿಡಿಯೋಗಳನ್ನು ಫಾಲೋ ಮಾಡುತ್ತಾರೆ.
ಒಂದು ವೇಳೆ ಅವುಗಳು ಅಭ್ಯರ್ಥಿಗಳ ಚುನಾವಣಾ ವೆಚ್ಚದ ವ್ಯಾಪ್ತಿಗೆ ಬರುತ್ತಿದ್ದರೆ, ನೋಡಲ್ ಅಧಿಕಾರಿಗಳ ಮೂಲಕ ಜಿಲ್ಲಾ ಮಟ್ಟದ ನೀತಿ ಸಂಹಿತೆ ಜಾರಿ ಸಮಿತಿಗೆ ಆ ಬಗ್ಗೆ ಕೊಡಲಾಗುತ್ತದೆ. ಮೇಲಿನ ಹಂತದಲ್ಲಿ ಪರಿಶೀಲನೆ ನಡೆಸಿದ ಬಳಿಕ ಒಂದೊಮ್ಮೆ ಅದು ಚುನಾವಣಾ ವೆಚ್ಚದ ವ್ಯಾಪ್ತಿಗೆ ಬರುತ್ತಿದ್ದರೆ, ಅದನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುತ್ತದೆ. ಈ ವೆಚ್ಚ ಸೇರಿಸಿ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಚುನಾವಣಾ ವೆಚ್ಚವನ್ನು ಲೆಕ್ಕ ಹಾಕಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಹೇಳುತ್ತಾರೆ.
30 ವೆಚ್ಚ ವೀಕ್ಷಕರು
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ 30 ಮಂದಿ ಜಂಟಿ ನಿಯಂತ್ರಕರು ಹಾಗೂ ಉಪ ನಿಯಂತ್ರಕರನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ರಾಜ್ಯ ಚುನಾವಣಾ ಆಯೋಗ ನಿಯೋಜಿಸಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ, ನೋಡಲ್ ಅಧಿಕಾರಿ ಹಾಗೂ ವಾರ್ಡ್ ಮಟ್ಟದ ವೆಚ್ಚ ವೀಕ್ಷಕರ ಮೇಲುಸ್ತುವಾರಿಯ ಕೆಲಸ ಈ ತಂಡ ಮಾಡಲಿದೆ. ಜತೆಗೆ ವಿಶೇಷ ವೀಕ್ಷಕರಾಗಿ ನಿಯೋಜಸಲ್ಪಟ್ಟಿರುವ ಏಳು ಮಂದಿ ಹಿರಿಯ ಐಎಎಸ್ ಅಧಿಕಾರಿಗಳು, ಸಾಮಾನ್ಯ ವೀಕ್ಷಕರಾಗಿ ನಿಯೋಜನೆಗೊಂಡಿರುವ 25 ಮಂದಿ ಹಿರಿಯ ಕೆಎಎಸ್ ಅಧಿಕಾರಿಗಳು ನೆರವು ನೀಡಲಿದ್ದಾರೆ.
ಚುನಾವಣಾ ವೆಚ್ಚ
2011ರ ಸರ್ಕಾರದ ಅಧಿಸೂಚನೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ. ಅದರಂತೆ, ನಗರಸಭೆಯ ಅಭ್ಯರ್ಥಿಗಳಿಗೆ ಗರಿಷ್ಠ 2 ಲಕ್ಷ, ಪುರಸಭೆ ಅಭ್ಯರ್ಥಿಗಳಿಗೆ 1.50 ಲಕ್ಷ ಹಾಗೂ ಪಟ್ಟಣ ಪಂಚಾಯಿತಿ ಅಭ್ಯರ್ಥಿಗೆ 1 ಲಕ್ಷ ರೂ. ಗರಿಷ್ಟ ವೆಚ್ಚದ ಮಿತಿ ನಿಗದಿಪಡಿಸಲಾಗಿದೆ. ಇದರಲ್ಲಿ ಈ ಬಾರಿ ಅಬÂರ್ಥಿಗಳ “ಸೋಶಿಯಲ್ ಮೀಡಿಯಾ ಅಕೌಂಟ್’ಗಳಲ್ಲಿನ ಲೆಕ್ಕವೂ ಸೇರಿಸಿಕೊಳ್ಳಲಿದೆ.
ಅಭ್ಯರ್ಥಿಗಳ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ವಿವರ ಕೊಡುವಂತೆ ಆಯೋಗದಿಂದ ಹೇಳಿಲ್ಲ. ಆದರೆ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಭ್ಯರ್ಥಿಗಳ ಬಲ್ಕ್ ಎಸ್ಸೆಮ್ಮೆಸ್, ವಾಟ್ಸಪ್, ಫೇಸ್‌ಬುಕ್‌ಗಳಲ್ಲಿ ಬರುವ ಅಂಶಗಳು ಚುನಾವಣಾ ವೆಚ್ಚದ ವ್ಯಾಪ್ತಿಗೆ ಬರುತ್ತಿದ್ದರೆ, ಅದನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸುವ ಬಗ್ಗೆ ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ.
– ಎನ್.ಆರ್. ನಾಗರಾಜು, ಅಧೀನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ
– ರಫೀಕ್ ಅಹ್ಮದ್
ಟಾಪ್ ನ್ಯೂಸ್
