ಚನ್ನಮ್ಮನ ನಾಡಿನಲ್ಲಿ ಮೈತ್ರಿಯೇ ಮುಳುವು

Team Udayavani, May 5, 2019, 12:38 PM IST

ಬೆಳಗಾವಿ: ಕಿತ್ತೂರು ಕೋಟೆಯಲ್ಲಿ ಸಾಮ್ರಾಜ್ಯ ಸ್ಥಾಪಿಸಿ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿಗೆ ಈ ಸಲದ ಲೋಕಸಭೆ ಚುನಾವಣೆಗೂ ಯಾವುದೇ ಅಡೆತಡೆ ಇಲ್ಲವಾಗಿದೆ. ಬಿಜೆಪಿಯ ಪ್ರತಿಸ್ಪ್ಫರ್ಧಿ ಮೈತ್ರಿ ಅಭ್ಯರ್ಥಿಯ ಪರಿಚಯವೇ ಜನರಿಗಿಲ್ಲ. ಇದರ ಲಾಭ ಪಡೆದುಕೊಳ್ಳಲು ಮುದಾಗಿರುವ ಬಿಜೆಪಿ ಹೆಚ್ಚಿನ ಲೀಡ್‌ ಸಿಗುತ್ತದೆ ಎಂಬ ಆಶಾಭಾವನೆ ಹೊಂದಿದ್ದರೆ, ಈ ಅಂತರಕ್ಕೆ ಲಗಾಮು ಹಾಕಲು ಕಾಂಗ್ರೆಸ್‌ ಶತಾಯಗತಾಯ ಪ್ರಯತ್ನಿಸಿದೆ.

ಕೆನರಾ ಲೋಕಸಭೆಯ ಚನ್ನಮ್ಮನ ಕಿತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಈಗ ಮತದಾನ ಬಳಿಕ ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಹಳ್ಳಿ ಹಳ್ಳಿಗಳ ಜನರು ತಮ್ಮ ಸ್ವ ಕ್ಷೇತ್ರದ ಸಮಸ್ಯೆಗಳಿಗಿಂತ ದಿಲ್ಲಿ ಆಡಳಿತದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಯಾರಿಗೆ ಎಷ್ಟು ಮತ ಸಿಗಬಹುದು ಎಂಬ ಲೆಕ್ಕಾಚಾರಕ್ಕಿಂತ ಅಂತರ ಎಷ್ಟಾಗಬಹುದೆನ್ನುವುದೇ ಚರ್ಚೆಯ ವಿಷಯವಾಗಿದೆ.

ಐದು ಬಾರಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಬಗ್ಗೆ ವೈಯಕ್ತಿಕವಾಗಿ ಜನರಿಗೆ ಅಸಮಾಧಾನವಿದ್ದರೂ ಮತದಾನ ಮಾಡುವಾಗ ಈ ಬೇಸರ ಹೊರ ಹಾಕಿಲ್ಲ. ಬಿಜೆಪಿಗೆ ಪ್ರತಿಸ್ಪರ್ಧಿ ಆಗಿರುವ ಕಾಂಗ್ರೆಸ್‌ನ ಚಿಹ್ನೆಯ ಅಭ್ಯರ್ಥಿ ಈ ಬಾರಿ ಇಲ್ಲದಿರುವುದರಿಂದ ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ನೋವು ಅನುಭವಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಆನಂದ ಅಸ್ನೋಟಿಕರ ಕಣದಲ್ಲಿದ್ದರೂ ಮತದಾರರಿಗೆ ಮಾತ್ರ ಇವರು ಅಪರಿಚಿತರು. ಹೀಗಾಗಿ ಜೆಡಿಎಸ್‌ಗೆ ಇಲ್ಲಿ ಮತ ಸಿಗುವುದು ಅನುಮಾನ.

ಹೆಗಡೆ ಬಗ್ಗೆ ಅಸಮಾಧಾನ: ಸಂಸದ ಹೆಗಡೆ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ಬೆಳಗಾವಿಯಿಂದ ಧಾರವಾಡಕ್ಕೆ ಕಿತ್ತೂರು ಮೂಲಕ ರೈಲು ಮಾರ್ಗ, ಕೇಂದ್ರದಿಂದ ಕಿತ್ತೂರು ಅಭಿವೃದ್ಧಿಗೆ ಅನುದಾನ ತಂದಿಲ್ಲ ಎಂಬ ಬೇಸರ ಇದೆ. ಕೇವಲ ಹಿಂದುತ್ವ ಅಜೆಂಡಾ ಇಟ್ಟುಕೊಂಡು ಮತಗಳಿಗಾಗಿ ಸ್ಪರ್ಧಿಸಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪ ಮಾಡುತ್ತಿದ್ದಾರೆ.

ಮೈತ್ರಿ ಧರ್ಮ ಪಾಲಿಸಬೇಕೆಂದು ಕಾಂಗ್ರೆಸ್‌ನ ಕಟ್ಟಾ ಕಾರ್ಯಕರ್ತರು ಅಸ್ನೋಟಿಕರ ಪರವಾಗಿದ್ದರೆ, ಇನ್ನೂ ಕೆಲವು ಕಡೆಗೆ ಇದನ್ನು ವಿರೋಧಿಸಿ ಮತದಾನದಿಂದಲೇ ತಟಸ್ಥರಾಗಿ ಉಳಿದುಕೊಂಡಿದ್ದರು. ಪ್ರಚಾರದ ವೇಳೆಯಂತೂ ಕಾಂಗ್ರೆಸ್‌ನವರು ಅಷ್ಟೊಂದು ಕ್ರಿಯಾಶೀಲರಾಗಿರಲಿಲ್ಲ. ಇದರ ಲಾಭವನ್ನು ಬಿಜೆಪಿ ಸರಿಯಾಗಿ ಬಳಸಿಕೊಂಡಿದೆ. ಜೆಡಿಎಸ್‌ ಇಲ್ಲಿ ಭದ್ರವಾಗಿಲ್ಲದಿರುವುದೇ ಬಿಜೆಪಿಗೆ ಪ್ಲಸ್‌ ಪಾಯಿಂಟ್ ಆಗಿದೆ.

ಕಿತ್ತೂರಿನಲ್ಲಿ ಒಟ್ಟು 1,89,719 ಮತದಾರರಿದ್ದು, ಈಗ ಶೇ. 72.56ರಷ್ಟು ಮತದಾನವಾಗಿದೆ. ಅಂದರೆ 1,37,658 ಜನ ಹಕ್ಕು ಚಲಾಯಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆ ವೇಳೆಗೆ 33 ಸಾವಿರ ಮತಗಳ ಅಂತರ ಹಾಗೂ 2013ರ ಲೋಕಸಭೆಗೆ 26 ಸಾವಿರ ಮತಗಳ ಅಂತರ ಬಿಜೆಪಿಗೆ ಸಿಕ್ಕಿತ್ತು. ಈಗ ಮತ್ತಷ್ಟು ಉಮೇದಿನಲ್ಲಿರುವ ಬಿಜೆಪಿ 45 ಸಾವಿರಕ್ಕೂ ಹೆಚ್ಚು ಮತಗಳ ಲೀಡ್‌ ಸಿಗಲಿದೆ ಎಂಬ ಲೆಕ್ಕಾಚಾರ ಹಾಕುತ್ತಿದೆ.

ಬಿಜೆಪಿಯಿಂದ ಮೈತ್ರಿಗೆ ನಡುಕ: ಅತಿ ಹೆಚ್ಚಿನ ಲೀಡ್‌ ಬಿಜೆಪಿಗೆ ಸಿಗುವುದರಲ್ಲಿ ಅನುಮಾನವಿಲ್ಲ. 2013ರ ಲೋಕಸಭೆ ಹಾಗೂ 2018ರ ವಿಧಾನಸಭೆ ಚುನಾವಣೆಗಿಂತಲೂ ಹೆಚ್ಚಿನ ಅಂತರ ಸಿಗಲಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ನ ಡಿ.ಬಿ. ಇನಾಮದಾರ 33 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಈಗ ಹಳ್ಳಿ ಹಳ್ಳಿಗಳಲ್ಲಿಯೂ ಪ್ರಧಾನಿ ಮೋದಿ ಅವರ ವರ್ಚಸ್ಸು ನಮ್ಮ ಕೈ ಹಿಡಿದಿದೆ. ಐದು ಬಾರಿ ಸಂಸದರಾಗಿರುವ ಹೆಗಡೆ ಅವರ ಕಾರ್ಯವೈಖರಿ ಹಾಗೂ ಪ್ರಖರ ಭಾಷಣದಿಂದ ಬಿಜೆಪಿ ಭದ್ರ ಕೋಟೆಗೆ ಧಕ್ಕೆ ಆಗುವುದಿಲ್ಲ. ಹೆಗಡೆ ಅವರು ನಿರಂತರ ಜನ ಸಂಪರ್ಕ ಇಟ್ಟುಕೊಂಡಿದ್ದರಿಂದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ನಡುಕ ಹುಟ್ಟಿಸಿದೆ ಎನ್ನುತ್ತಾರೆ ಬಿಜೆಪಿ ಮುಖಂಡರು.

ಕಿತ್ತೂರಿನ 104 ಹಳ್ಳಿಗಳಲ್ಲಿಯೂ ಬಿಜೆಪಿ ಸಂಪರ್ಕ ಇಟ್ಟುಕೊಂಡಿತ್ತು. ಆದರೆ ಮೈತ್ರಿ ಅಭ್ಯರ್ಥಿ ಈ ಕ್ಷೇತ್ರಕ್ಕೆ ಬಂದಿದ್ದೇ ಅಪರೂಪ. ಇಲ್ಲಿ ಮೊದಲೇ ಜೆಡಿಎಸ್‌ಗೆ ಅಸ್ತಿತ್ವ ಇಲ್ಲ. ಕಾಂಗ್ರೆಸ್‌ನವರೇ ರ್ಯಾಲಿ, ಸಭೆ, ಪ್ರಚಾರಗಳನ್ನು ನಡೆಸಿದ್ದಾರೆ. ಹೆಚ್ಚಿನ ಸಂಖ್ಯೆಯ ಕೈ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್‌ಗೆ ಮತ ಹಾಕಿ ಎಂದು ಹೇಳಲೂ ಮುಜುಗರ ಪಡುತ್ತಿದ್ದರು. ಮೈತ್ರಿ ಧರ್ಮ ಪಾಲಿಸಬೇಕೆಂಬ ಕಟ್ಟುನಿಟ್ಟಿನ ಆದೇಶದಿಂದಲೇ ಕೆಲವರು ಮಾತ್ರ ಪ್ರಚಾರ ನಡೆಸಿದ್ದಾರೆ.

ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಗೆಲುವಿನ ಬೆಟ್ಟಿಂಗ್‌ಕ್ಕಿಂತ ಹೆಗಡೆಗೆ ಮತಗಳ ಅಂತರಕ್ಕಾಗಿ ಅಲ್ಲಲ್ಲಿ ಬೆಟ್ಟಿಂಗ್‌ ನಡೆದಿದೆ. ದೇಶದಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ಎಷ್ಟು ಸೀಟುಗಳು ಎಂಬ ಬಗ್ಗೆಯೂ ಜನರು ಬಾಜಿ ಹಚ್ಚುತ್ತಿದ್ದಾರೆ. ಕ್ಷೇತ್ರದ ಜನರ ಲಕ್ಷ್ಯ ಹೆಚ್ಚಾಗಿ ದಿಲ್ಲಿಯತ್ತ ನೆಟ್ಟಿರುವುದಂತೂ ಸುಳ್ಳಲ್ಲ.

ಕಿತ್ತೂರು ಕ್ಷೇತ್ರ ಮಾತ್ರವಲ್ಲ ಇಡೀ ದೇಶದಲ್ಲಿಯೇ ಮೋದಿ ಆಡಳಿತವನ್ನು ಭಾರತೀಯರು ಮೆಚ್ಚಿಕೊಂಡಿದ್ದಾರೆ. ಈ ಮೊದಲು ಮತದಾನ ಮಾಡುವಂತೆ ಮನೆ ಮನೆಗೆ ಪ್ರಚಾರ ಮಾಡಬೇಕಾಗುತ್ತಿತ್ತು. ಈಗ ಸ್ವಯಂ ಪ್ರೇರಿತರಾಗಿ ಜನರು ಮೋದಿಗೆ ಮತ ಹಾಕಿದ್ದಾರೆ. ಕಿತ್ತೂರಿನಲ್ಲಿ 40 ಸಾವಿರಕ್ಕಿಂತಲೂ ಹೆಚ್ಚಿನ ಮತಗಳ ಅಂತರ ಸಿಗುವುದು ಗ್ಯಾರಂಟಿ. ಬಿಜೆಪಿ ಇನ್ನಷ್ಟು ಭದ್ರವಾಗಿದೆ.
• ಮಹಾಂತೇಶ ದೊಡಗೌಡ್ರ, ಕಿತ್ತೂರು ಕ್ಷೇತ್ರದ ಶಾಸಕರು
ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸಮನ್ವಯತೆಯಿಂದ ಪ್ರಚಾರ ನಡೆಸಲಾಗಿದೆ. ಐದು ಬಾರಿ ಸಂಸದರಾಗಿರುವ ಹೆಗಡೆ ಕಿತ್ತೂರು ಕೋಟೆ ಅಭಿವೃದ್ಧಿ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತಿಲ್ಲ. ಕೇವಲ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತ ಜನರ ದಾರಿ ತಪ್ಪಿಸುತ್ತಿದ್ದಾರೆ. ಈ ಸಲ ಜೆಡಿಎಸ್‌ಗೆ 10-15 ಸಾವಿರ ಮತಗಳ ಅಂತರ ಸಿಗಲಿದೆ.
•ಅರುಣಕುಮಾರ ಬಿಕ್ಕಣ್ಣವರ, ಕಿತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು
ಮತದಾನ ಪ್ರಮಾಣ ಶೇ 72.56 ಜೆಡಿಎಸ್‌ ಅಭ್ಯರ್ಥಿ ಯಾರೆಂಬುದೇ ಇಲ್ಲಿಯ ಜನರಿಗೆ ಗೊತ್ತಿಲ್ಲ. ಮೊದಲಿ ನಿಂದಲೂ ಇಲ್ಲಿ ಸ್ಪರ್ಧೆ ಇರುವುದು ಕೇವಲ ಬಿಜೆಪಿ-ಕಾಂಗ್ರೆಸ್‌ ಮಧ್ಯೆ. ಆದರೆ ಜೆಡಿಎಸ್‌ ಕಣದಲ್ಲಿರುವುದು ಬಿಜೆಪಿಗೆ ಹೆಚ್ಚಿನ ಮತಗಳ ಅಂತರ ಸಿಗುವುದರಲ್ಲಿ ಸಂದೇಹವಿಲ್ಲ. ಮೋದಿ ಫ್ಯಾಕ್ಟರ್‌ ಹೆಚ್ಚಾಗಿ ಇರುವುದರಿಂದ ಬಿಜೆಪಿಯ ಗೆಲುವಿನ ನಾಗಾಲೋಟವನ್ನು ಯಾರೂ ತಡೆಯಲು ಸಾಧ್ಯವಿಲ್ಲ. •ರವಿ ರಾಮಣ್ಣವರ,ದೇಶನೂರ ನಿವಾಸಿ ಒಟ್ಟು ಮತದಾರರು 1,89,719 ಮತ ಚಲಾಯಿಸಿದವರು 1,37,658ಪುರುಷರು 72,791ಮಹಿಳೆಯರು 64,867

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ