ಅಧ್ಯಕ್ಷ ಸ್ಥಾನ ಸಮರ್ಥವಾಗಿ ನಿಭಾಯಿಸುವೆ

Team Udayavani, Jul 5, 2018, 6:00 AM IST

ಶೃಂಗೇರಿ/ಚಿಕ್ಕಮಗಳೂರು: ಕಾಂಗ್ರೆಸ್‌ ಪಕ್ಷಕ್ಕೆ ಸವಾಲಿನ ದಿನಗಳಾದ ಈ ಸಂದರ್ಭದಲ್ಲಿ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.ಇದನ್ನು ಸಮರ್ಥವಾಗಿ ನಿಭಾಯಿಸುವೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಪತ್ನಿ ಟಬೂರಾವ್‌ ಜನ್ಮದಿನ ಹಿನ್ನೆಲೆಯಲ್ಲಿ ಅವರು ಬುಧವಾರ ಕುಟುಂಬ ಸದಸ್ಯರೊಂದಿಗೆ ಶೃಂಗೇರಿ ಶಾರದಾ ಪೀಠಕ್ಕೆಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ನರಸಿಂಹವನದ ಗುರುನಿವಾಸಕ್ಕೆ ತೆರಳಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಪಕ್ಷದಲ್ಲಿ ಈಗಾಗಲೇ ಅನೇಕ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಪಕ್ಷದ ಸಂಘಟನೆ ಮತ್ತು ಕಾಂಗ್ರೆಸ್‌ ಯೋಜನೆಗಳಲ್ಲಿ ಜನರಿಗೆ ವಿಶ್ವಾಸ ಮೂಡಿಸುವ ರೀತಿಯಲ್ಲಿ ವರಿಷ್ಠರ ಮಾರ್ಗದರ್ಶನದೊಂದಿಗೆ ಕಾರ್ಯಕರ್ತರಿಗೆ, ಮುಖಂಡರಿಗೆ ಸ್ಫೂರ್ತಿ ತುಂಬಿ ಪಕ್ಷ ಸಂಘಟಿಸುತ್ತೇನೆ. ಪ್ರಸ್ತುತ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿದೆ.

ಮತ್ತೂಂದು ಕಡೆ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಸರ್ಕಾರ ಯಶಸ್ವಿಯಾಗಿ ನಡೆದುಕೊಂಡು ಹೋಗಬೇಕು ಎಂದರು.

ಪತ್ನಿಯ ಜನ್ಮದಿನ ಹಿನ್ನೆಲೆಯಲ್ಲಿ ಶೃಂಗೇರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೆ. ಕಾಕತಾಳೀಯ ಎಂಬಂತೆ ಗುರುಗಳ ಆಶೀರ್ವಾದ ಪಡೆದು ಹೊರ ಬರುತ್ತಿದ್ದಂತೆಯೇ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಅವರು
“ರಾಹುಲ್‌ ಗಾಂಧಿಯವರು ನಿಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಯಶಸ್ವಿಯಾಗಿ ಕೆಲಸ ಮಾಡಿ’ ಎಂದು ತಿಳಿಸಿದರು. ಪತ್ನಿ ಟಬೂರಾವ್‌,ಮಕ್ಕಳಾದ ಅನನ್ಯರಾವ್‌ ಮತ್ತು ಅಮಿರಾರಾವ್‌, ಕೆಪಿಸಿಸಿ ರಾಜ್ಯ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ|ನಿರಂತರ ಗಣೇಶ್‌ ಉಪಸ್ಥಿತರಿದ್ದರು.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ