ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ರೆ ಕ್ರಮ
Team Udayavani, Sep 28, 2020, 7:44 PM IST
ಸಾಂದರ್ಭಿಕ ಚಿತ್ರ
ಚಿತ್ರದುರ್ಗ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆಯಾಗಿರುವ ಬೆಳೆಗಳಿಗೆ ಅವಶ್ಯವಿರುವ ಯೂರಿಯಾ ರಸಗೊಬ್ಬರದ ದಾಸ್ತಾನಿದ್ದು, ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಸದಾಶಿವ ತಿಳಿಸಿದ್ದಾರೆ.
ಕಳೆದ 8 ತಿಂಗಳಲ್ಲಿ ಜಿಲ್ಲೆಗೆ ಆರ್ ಸಿಎಫ್ ಕಂಪನಿಯ 692.3 ಮೆಟ್ರಿಕ್ ಟನ್, ಮಂಗಳೂರು ಕೆಮಿಕಕ್ಸ್ ಆ್ಯಂಡ್ ಫರ್ಟಿಲೈಜರ್ಸ್ (ಎಂಸಿಎಫ್ ಎಲ್) ಕಂಪನಿಯ 679.4 ಮೆ. ಟನ್, ಮದ್ರಾಸ್ ಫರ್ಟಿಲೈಜರ್ಸ್ ಲಿಮಿಟೆಡ್ (ಎಂಎಫ್‌ಎಲ್) ಕಂಪನಿಯ 673.6 ಮೆ. ಟನ್, ಇಂಡಿಯನ್ ಪೊಟ್ಯಾಷ್ ಲಿಮಿಟೆಡ್ (ಐಪಿಎಲ್) ಕಂಪನಿಯ 141 ಮೆ. ಟನ್, ಎನ್‌ಎಫ್‌ಸಿಎಲ್ ಕಂಪನಿಯ108 ಮೆ. ಟನ್, ಜಿಎಸ್‌ಎಫ್‌ಸಿ ಕಂಪನಿಯ 15.3 ಮೆ. ಟನ್, ಜೂವಾರಿ ಕಂಪನಿಯ 100 ಮೆ. ಟನ್ ಸೇರಿ ಒಟ್ಟಾರೆ 2420 ಮೆ. ಟನ್ ಯೂರಿಯಾ ರಸಗೊಬ್ಬರ ಸರಬರಾಜಾಗಿದೆ. ಮುಂದಿನ ವಾರದಲ್ಲಿ ಜಿಲ್ಲೆಗೆ ಇಂಡಿಯನ್ ಪೊಟ್ಯಾಷ್ ಲಿಮಿಟೆಡ್ ಕಂಪನಿಯ 500 ಮೆ. ಟನ್, ಎಸ್‌ಪಿಐಸಿ ಕಂಪನಿಯ 300 ಮೆ. ಟನ್ ಜುವಾರಿ ಕಂಪನಿಯ 400 ಮೆ. ಟನ್ ಯೂರಿಯಾ ಪೂರೈಕೆಗಾಗಿ ಕೃಷಿ ಇಲಾಖೆಯ ಕೇಂದ್ರ ಕಚೇರಿಯಿಂದಕ್ರಮ ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯ ಯಾವುದೇ ರಸಗೊಬ್ಬರ ಮಾರಾಟಗಾರರು ಯೂರಿಯಾ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೆ ನಿಯಮಾನುಸಾರ ಕಾನೂನು ಕ್ರಮ ಜರುಗಿಸಿ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಎಲ್ಲಾ ಮಾರಾಟಗಾರರು ಕಡ್ಡಾಯವಾಗಿ ಪಿಒಎಸ್ ಯಂತ್ರದ ಮೂಲಕವೇ ರಸಗೊಬ್ಬರಗಳನ್ನು ವಿತರಿಸಬೇಕು. ಅಸಮರ್ಪಕವಾಗಿ ವಿತರಣೆ ಮಾಡಿದ ಹೊಳಲ್ಕೆರೆ ತಾಲೂಕಿನ 7 ಖಾಸಗಿ ಚಿಲ್ಲರೆ ರಸಗೊಬ್ಬರ ಅಂಗಡಿಗಳ ಪರವಾನಗಿ ಹಾಗೂ ಚಿತ್ರದುರ್ಗ ತಾಲೂಕಿನ 4 ಚಿಲ್ಲರೆ ರಸಗೊಬ್ಬರದ ಅಂಗಡಿಗಳ ಪರವಾನಗಿಯನ್ನು ಅಮಾನತ್ತಿನಲ್ಲಿಡಲಾಗಿದೆ. ರಸ ಗೊಬ್ಬರ ಖರೀದಿಸಲು ತೆರಳುವ ರೈತರು ತಪ್ಪದೇ ತಮ್ಮ ಆಧಾರ್ ಕಾರ್ಡ್ ಹಾಗೂ ಇತರೆ ಒಂದು ಗುರುತಿನ ಚೀಟಿ (ಎμಕ್, ಡ್ರೈವಿಂಗ್ ಲೈಸನ್ಸ್, ಕಿಸಾನ್ ಕಾರ್ಡ್, ಎಫ್‌ಐಡಿ ಕಾರ್ಡ್) ತೆಗೆದುಕೊಂಡು ಬರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.