ಶಿಂಷಾನದಿ ತೀರದಲ್ಲಿ ಮರಳು ಗಣಿಗಾರಿಕೆ

ಏತ ನೀರಾವರಿ ಯೋಜನೆಗಳು ಸ್ತಬ್ಧಗೊಳ್ಳುವ ಆತಂಕ • ಹೆಚ್ಚುತ್ತಿರುವ ನದಿಯ ಆಳ, ಪಾತಾಳ ಸೇರ್ತಿರೋ ಅಂತರ್ಜಲ

Team Udayavani, May 13, 2019, 2:53 PM IST

ಮಂಡ್ಯ: ಮದ್ದೂರು ತಾಲೂಕಿನ ಶಿಂಷಾ ನದಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ರಾಜಾರೋ ಷವಾಗಿಯೇ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ಈ ಭಾಗದ ಏತ ನೀರಾವರಿ ಯೋಜನೆಗಳು, ಅಂತರ್ಜಲ, ಕೃಷಿ ಚಟುವಟಿಕೆ, ನದಿ ಸೇತುವೆಗಳಿಗೆ ಕಂಟಕ ಎದುರಾಗಿದೆ.

ತಾಲೂಕಿನ ಕೊಪ್ಪ ಹಾಗೂ ಆತಗೂರು ಹೋಬಳಿಯ ನದಿ ಪಾತ್ರಗಳಲ್ಲಿ ಬರುವ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆದಿದ್ದರೂ ತಹಶೀಲ್ದಾರ್‌ ಸೇರಿದಂತೆ ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್‌ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆಗೆ ಅಧಿಕಾರಿಗಳು ಬೆಂಬಲವಾಗಿ ನಿಂತಿರುವ ಬಗ್ಗೆ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಅಲ್ಲದೆ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಬೆಂಬಲಿಗರೇ ಮರಳು ದಂಧೆಯ ನೇತೃತ್ವ ವಹಿಸಿದ್ದು, ಅಧಿಕಾರಿಗಳ ಕೈ ಕಟ್ಟಿಹಾಕಿದ್ದಾರೆಂದು ಹೇಳಲಾಗಿದೆ.

ಪಕ್ಷಿಗಳಿಗೂ ಆಹಾರ, ನೀರಿಲ್ಲ: ಕೊಪ್ಪ ಹೋಬಳಿಗೆ ಸೇರಿದ ಕೂಳಗೆರೆ ಹಾಗೂ ಕೊಕ್ಕರೆ ಬೆಳ್ಳೂರು ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಇಗ್ಗಲೂರು ಅಣೆಕಟ್ಟು ವ್ಯಾಪ್ತಿಯಲ್ಲಿ ಬರುವ ಕೂಳಗೆರೆ ಹಾಗೂ ಬನ್ನಹಳ್ಳಿ ಏತ ನೀರಾವರಿ ಯೋಜನೆಗಳು ಸ್ತಬ್ಧಗೊಳ್ಳುವ ಆತಂಕ ಎದುರಾಗಿದೆ. ಈ ಪ್ರದೇಶದಲ್ಲೇ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಇರುವುದರಿಂದ ಪಕ್ಷಿಗಳಿಗೆ ಆಹಾರ ಮತ್ತು ನೀರು ಸಿಗದಂತಹ ಸನ್ನಿವೇಶ ಸೃಷ್ಟಿಯಾ ಗುತ್ತಿದೆ. ಅಲ್ಲದೆ, ಮರಳು ಗಣಿಗಾರಿಕೆಯಿಂದ ಸೇತುವೆಗಳಿಗೂ ಅಪಾಯ ಸ್ಥಿತಿ ಎದುರಾಗಿದೆ.

ಉತ್ತರ ಪ್ರದೇಶದ ಕಾರ್ಮಿಕರು: ನದಿಯಿಂದ ಮರಳು ತೆಗೆಯುವ ಕೆಲಸಕ್ಕಾಗಿ ಉತ್ತರ ಪ್ರದೇಶದಿಂದ ಕೂಲಿ ಕಾರ್ಮಿಕರನ್ನು ಕರೆಸಲಾಗಿದೆ. ಅವರು ನದಿಯಿಂದ ಮರಳನ್ನು ತೆಗೆದು ಹೊರಗೆ ಶೇಖರಣೆ ಮಾಡಿದರೆ ರಾಜಕಾರಣಿಗಳ ಬೆಂಬಲಿಗರು ಅದನ್ನು ಎತ್ತಿನಗಾಡಿಗಳ ಮೂಲಕ ತಂದು ನಿಗದಿತ ಸ್ಥಳದಲ್ಲಿ ಶೇಖರಣೆ ಮಾಡಿ ರಾತ್ರಿ ವೇಳೆ ಟಿಪ್ಪರ್‌ಗಳ ಮೂಲಕ ಬೆಂಗಳೂರು-ಮೈಸೂರು ಕಡೆಗೆ ರವಾನಿಸುತ್ತಿದ್ದಾರೆ.

ಮರಳು ತೆಗೆಯಲು ಬಂದಿರುವ ಉತ್ತರ ಪ್ರದೇಶದ ಕೂಲಿ ಕಾರ್ಮಿಕರಿಗೆ ಊರಿನ ಹೊರವಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಇದರಿಂದ ಗ್ರಾಮದ ಮಹಿಳೆಯರು ಜಮೀನುಗಳ ಬಳಿ ಹೋಗುವುದಕ್ಕೆ ಭಯಪಡುತ್ತಿದ್ದಾರೆ.

ರಸ್ತೆ ಬದಿ ಸಂಗ್ರಹ: ಕೂಳಗೆರೆ ವ್ಯಾಪ್ತಿಯ ಅರೆ ತಿಪ್ಪೂರು, ಅಣ್ಣಹಳ್ಳಿ ದೊಡ್ಡಿ, ಚಿಕ್ಕಲೇರನದೊಡ್ಡಿ ಗ್ರಾಮಗಳ ಬಳಿ ಎತ್ತಿನಗಾಡಿಗಳಲ್ಲಿ ತಂದ ಮರಳನ್ನು ರಸ್ತೆ ಬದಿ ದಾಸ್ತಾನು ಮಾಡಿ ನಂತರ ಜೆಸಿಬಿ ಮೂಲಕ ಟಿಪ್ಪರ್‌ಗಳಿಗೆ ತುಂಬಿ ನಿತ್ಯ ನೂರಾರು ಲೋಡ್‌ ಮರಳನ್ನು ವಿವಿಧೆಡೆಗೆ ಸಾಗಣೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮರಳು ದಂಧೆಯಿಂದಾಗಿ ಗ್ರಾಮದ ಯುವಕರು ವಿದ್ಯಾಭ್ಯಾಸ ತೊರೆದು ಅಕ್ರಮವಾಗಿ ಮರಳು ಸಾಗಿಸುವವರ ಜೊತೆ ಸೇರಿಕೊಂಡಿದ್ದಾರೆ. ಮದ್ಯವ್ಯಸನಿಗಳಾಗಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ. ಅಲ್ಲದೆ, ಗ್ರಾಮಗಳ ರಸ್ತೆಗಳು ಮರಳು ಸಾಗಣೆ ಮಾಡುವ ಲಾರಿಗಳಿಂದ ಹಾಳಾಗುತ್ತಿವೆ. ಅಕ್ರಮ ಮರಳು ಗಣಿಗಾರಿಕೆಯಿಂದ ಇಗ್ಗಲೂರು ಡ್ಯಾಂ, ಕೂಳಗೆರೆ ಎಬಿಸಿ ಏತ ನೀರಾವರಿ ಯೋಜನೆಗಳಿಗೆ ಮರಳು ಗಣಿಗಾರಿಕೆಯಿಂದ ಅಪಾಯವಿರುವುದನ್ನು ಮನಗಂಡಿರುವ ಗ್ರಾಮಸ್ಥರು ಅದನ್ನು ಸಂರಕ್ಷಣೆ ಮಾಡಿಕೊಡುವಂತೆ ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.

ಏತ ನೀರಾವರಿ ಯೋಜನೆಗಳು ಸ್ತಬ್ಧ: ಶಿಂಷಾ ನದಿ ವ್ಯಾಪ್ತಿಯಲ್ಲಿ ಬರುವ ರಾಮನಗರ ಜಿಲ್ಲೆಗೆ ಸೇರಿರುವ ಇಗ್ಗಲೂರು ಗ್ರಾಮದ ಹೆಚ್.ಡಿ. ದೇವೇಗೌಡ ಅಣೆಕಟ್ಟು ನಿರ್ಮಾಣಗೊಂಡು ಅಲ್ಲಿ ನೀರು ಶೇಖರಣೆಯಾಗುವುದರಿಂದ ಅಲ್ಲಿ ಏತ ನೀರಾವರಿ ಯೋಜನೆ ಮೂಲಕ ಸುಮಾರು 25ಕ್ಕೂ ಹೆಚ್ಚು ಗ್ರಾಮದಜನರ ಕೃಷಿ ಚಟುವಟಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಭಾಗದ ಜನರು ಕೃಷಿಯನ್ನೇ ತಮ್ಮ ಜೀವನಾಧಾರ ಮಾಡಿಕೊಂಡಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯಿಂದ ಏತ ನೀರಾವರಿ ಯೋಜನೆಗಳು ಸ್ಥಗಿತಗೊಂಡರೆ ಈ ಭಾಗದ ಜನರ ಬದುಕು ಬರಡಾಗುವ ಆತಂಕ ಎದುರಾಗಿದೆ.

ನಿತ್ಯ 10 ಲಕ್ಷ ರಾಜಧನ ನಷ್ಟ: ಶಿಂಷಾ ನದಿ ಪಾತ್ರದಿಂದ ನಿತ್ಯ 10 ಲಕ್ಷ ರೂ. ರಾಜಧನ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಪ್ರತಿ ಲೋಡ್‌ ಮರಳಿಗೆ 30 ಸಾವಿರ ರೂ. ಹಣ ಪಡೆಯಲಾಗುತ್ತಿದೆ. ಇದಲ್ಲದೆ, 10 ಲಕ್ಷ ರೂ. ಹಣವನ್ನು ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್‌ ಅಧಿಕಾರಿಗಳಿಗೆ ಪ್ರತಿ ತಿಂಗಳು ಹಂಚಿಕೆ ಮಾಡಿ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಸೊಲ್ಲೆತ್ತದಂತೆ ಮಾಡಿದ್ದಾರೆ. ಮರಳು ದಂಧೆಕೋರರು ನೀಡುವ ಹಣವನ್ನು ಜೇಬಿಗಿಳಿಸಿಕೊಂಡ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

ಹೆಚ್ಚಿದ ನದಿ ಆಳ: ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ನದಿಯ ಆಳ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2010ರಲ್ಲಿ ನದಿಯ ಆಳ 15 ಅಡಿ ಇದ್ದರೆ, 2019ರ ವೇಳೆಗೆ ಅದು 35 ಅಡಿಗೆ ಹೆಚ್ಚಿದೆ. ಇದು ಅಪಾಯದ ಮುನ್ಸೂಚನೆಯಾಗಿದೆ. ಅಕ್ರಮ ಮರಳು ಗಣಿಗಾರಿಕೆ ಹೀಗೆಯೇ ಮುಂದುವರಿದರೆ ಇಗ್ಗಲೂರು ಡ್ಯಾಂಗೆ ನೀರಿನ ಕೊರತೆ ಸೃಷ್ಟಿಯಾಗುವ ಹಾಗೂ ಈ ಭಾಗದಲ್ಲಿ ಅಂತರ್ಜಲ ಪಾತಾಳಕ್ಕಿಳಿಯುವ ಸಾಧ್ಯತೆಗಳಿವೆ.

ನಿರಂತರ ಮರಳು ಗಣಿಗಾರಿಕೆಯಿಂದ ಉಂಟಾಗುತ್ತಿರುವ ಅಪಾಯ ಕುರಿತಂತೆ ಮುಖ್ಯಮಂತ್ರಿ, ರಾಷ್ಟ್ರೀಯ ಹಸಿರು ಪ್ರಾಧಿಕಾರ, ರಾಜ್ಯಪಾಲರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಗೃಹಮಂತ್ರಿ, ಜಲಸಂಪನ್ಮೂಲ ಸಚಿವರು, ಪ್ರವಾಸೋದ್ಯಮ ಇಲಾಖೆ, ದಕ್ಷಿಣ ವಲಯ ಐಜಿಪಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ಅಧಿಕ್ಷಕರಿಗೆ ಗ್ರಾಮಸ್ಥರು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಪರಿಸರ ಉಳಿವು ಯಾರಿಗೂ ಬೇಕಿಲ್ಲ: ಅಕ್ರಮ ಮರಳು ಗಣಿಗಾರಿಕೆಯಿಂದ ಜೀವಸೆಲೆ, ಅಂತರ್ಜಲ, ನೀರಾವರಿ ಯೋಜನೆಗಳ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದ್ದರೂ ಯಾವೊಬ್ಬ ಇಲಾಖೆ ಅಧಿಕಾರಿಗಳಿಗೂ ಪರಿಸರ ಉಳಿಸುವ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲ. ಹಣ ಪಡೆದು ಪ್ರಕೃತಿಯನ್ನು ಮರಳು ದಂಧೆಕೋರರಿಗೆ ಬಲಿಕೊಡಲು ನಿರ್ಧರಿಸಿರುವಂತೆ ಕಂಡುಬರುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಿಸುವ ಆತಂಕ ಸೃಷ್ಠಿಯಾಗಿದೆ.


ಈ ವಿಭಾಗದಿಂದ ಇನ್ನಷ್ಟು

  • ಮಂಡ್ಯ: ನಗರಸಭಾ ವ್ಯಾಪ್ತಿಯಲ್ಲಿ ಅಮೃತ್‌ ಯೋಜನೆಯಡಿ ಅನುಷ್ಠಾನವಾಗುತ್ತಿರುವ ಕುಡಿಯುವ ನೀರು ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಅಧಿಕಾರಿಗಳು...

  • ಶ್ರೀರಂಗಪಟ್ಟಣ: ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ದೋಸ್ತಿಗಳಾಗಿದ್ದರೂ ಪಟ್ಟಣ ಪುರಸಭೆ ಚುನಾವಣೆಯಲ್ಲಿ ಎದುರಾಳಿಗಳಾಗಿ ಸ್ಪರ್ಧಿಸಿದ್ದು, ಮಾಜಿ ಶಾಸಕ...

  • ಮಂಡ್ಯ: ಲೋಕಸಭಾ ಕ್ಷೇತ್ರಗಳಲ್ಲೇ ಹೈವೋಲೆrೕಜ್‌ ಕ್ಷೇತ್ರವೆಂದು ಬಿಂಬಿತವಾಗಿರುವ ಮಂಡ್ಯ ಲೋಕಸಭಾ ಚುನಾವಣಾ ಫ‌ಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ತೀವ್ರ...

  • ಮಂಡ್ಯ: ಕಾನೂನು ಬಾಹಿರವಾಗಿ ಕಾರ್ಮಿಕರಿಗೆ ಕೆಲಸ ನಿರಾಕರಣೆ ಮಾಡಿರುವುದನ್ನು ವಿರೋಧಿಸಿ ಮತ್ತು ಹೈಕೋರ್ಟ್‌ ತೀರ್ಪಿನನ್ವಯ ಕನಿಷ್ಠ ವೇತನ ಜಾರಿಗೆ ಅಗ್ರಹಿಸಿ...

  • ಕೆ.ಆರ್‌.ಪೇಟೆ: 29ರಂದು ಪುರಸಭೆಯ 23 ವಾರ್ಡುಗಳಿಗೆ ಚುನಾವಣೆಗೆ ಸ್ಪರ್ಧಿಸಲು 72 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಆದರೆ ರಾಜಕೀಯ ಮುಖಂಡರ ಹಾಗೂ ಹಿತೈಷಿಗಳ ಒತ್ತಡಕ್ಕೆ...

ಹೊಸ ಸೇರ್ಪಡೆ