250 ವರ್ಷಗಳ ಇತಿಹಾಸವುಳ್ಳ ಆಟಿಕೆ ಕಂಪನಿ “ಹ್ಯಾಮ್ಲೀಸ್”  ರಿಲಯನ್ಸ್ ತಕ್ಕೆಗೆ

Team Udayavani, May 14, 2019, 3:33 PM IST

ಮುಂಬೈ / ಲಂಡನ್: ರಿಲಯನ್ಸ್ ಇಂಡಸ್ಟ್ರಿಸ್ ಅಂಗ ಸಂಸ್ಥೆಯಾದ ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್,  ಹಾಂಗ್ ಕಾಂಗ್ ನಲ್ಲಿರುವ ಸಿ ಬ್ಯಾನರ್ ಇಂಟರ್ ನ್ಯಾಶನಲ್ ಹೋಲ್ಡಿಂಗ್ಸ್ ಒಡೆತನದ ಹ್ಯಾಮ್ಲೀಸ್ ಬ್ರ್ಯಾಂಡ್‌ನ ಹ್ಯಾಮ್ಲೀಸ್ ಗ್ಲೋಬಲ್ ಹೋಲ್ಡಿಂಗ್ಸ್ ಲಿಮಿಟೆಡ್‌ನ 100% ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ. ಈ ಒಪ್ಪಂದಕ್ಕೆ ರಿಲಯನ್ಸ್ ಬ್ರಾಂಡ್ ಮತ್ತು ಸಿ ಬ್ಯಾನರ್ ಇಂಟರ್ ನ್ಯಾಶನಲ್ ಸಹಿ ಹಾಕಿದೆ.

1760 ರಲ್ಲಿ ಸ್ಥಾಪಿತವಾದ ಹ್ಯಾಮ್ಲೀಸ್ ಪ್ರಪಂಚದಲ್ಲೇ ಅತಿ ಹಳೆಯ ಮತ್ತು ಅತಿದೊಡ್ಡ ಆಟಿಕೆ ಅಂಗಡಿ ಆಗಿದ್ದು, ಸುಮಾರು 250 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಕಂಪನಿ ಆಟಿಕೆಗಳಿಗೆ ಜೀವ ತರುವ ಮೂಲಕ ಪ್ರಪಂಚದಾದ್ಯಂತ ಮಕ್ಕಳ ನಗುವಿಗೆ ಕಾರಣವಾಗಿದೆ. ನಾಟಕ, ಮನರಂಜನೆ ಮತ್ತು ಅದರ ಚಿಲ್ಲರೆ ಅನುಭವದೊಂದಿಗೆ ಗುಣಮಟ್ಟ ಮತ್ತು ವ್ಯಾಪಕ ಶ್ರೇಣಿಯ ಗೊಂಬೆಗಳ ಒಂದು ಅನನ್ಯ ಮಾದರಿಯನ್ನು ಹ್ಯಾಮ್ಲೀಸ್ ನಲ್ಲಿ ಕಾಣಬಹುದಾಗಿದೆ. ಜಾಗತಿಕವಾಗಿ, ಹ್ಯಾಮ್ಲೀಸ್ 18 ದೇಶಗಳಲ್ಲಿ 167 ಮಳಿಗೆಗಳನ್ನು ಹೊಂದಿದೆ. ಭಾರತದಲ್ಲಿ, ರಿಲಯನ್ಸ್ ಹ್ಯಾಮ್ಲೀಸ್ ಗೆ ಮಾಸ್ಟರ್ ಫ್ರಾಂಚೈಸ್ ಹೊಂದಿದೆ ಮತ್ತು ಪ್ರಸ್ತುತ 29 ನಗರಗಳಲ್ಲಿ 88 ಮಳಿಗೆಗಳನ್ನು ಹೊಂದಿದೆ. ಈ ಸ್ವಾಧೀನತೆಯು ಜಾಗತಿಕ ಆಟಿಕೆ ಚಿಲ್ಲರೆ ಉದ್ಯಮದಲ್ಲಿ ರಿಲಯನ್ಸ್ ಬ್ರಾಂಡ್ಸ್ ಗೆ ಹೊಸ ಗುರುತು ನೀಡಲಿದೆ.

ಈ ಒಪ್ಪಂದದ ಕುರಿತು ಮಾತನಾಡಿದ ರಿಲಯನ್ಸ್ ಬ್ರಾಂಡ್ಸ್ ಅಧ್ಯಕ್ಷ ಮತ್ತು ಸಿಇಒ ದರ್ಶನ್ ಮೆಹ್ತಾ,

“ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಹ್ಯಾಮ್ಲೀಸ್ ಬ್ರ್ಯಾಂಡ್ ನಡಿಯಲ್ಲಿ ಆಟಿಕೆ ಚಿಲ್ಲರೆ ಮಾರಾಟದಲ್ಲಿ ನಾವು ಒಂದು ಗಮನಾರ್ಹವಾದ ಮತ್ತು ಲಾಭದಾಯಕ ವ್ಯಾಪಾರವನ್ನು ನಿರ್ಮಿಸಿದ್ದೇವೆ. ಈ 250 ವರ್ಷದ ಇತಿಹಾಸವಿರುವ ಲಂಡನ್ ಖ್ಯಾತಿಯ ಆಟಿಕೆ ಕಂಪನಿಯು ಚಿಲ್ಲರೆ ವ್ಯಾಪಾರದ ಪರಿಕಲ್ಪನೆಯನ್ನು ಪ್ರಾರಂಭಿಸಿ ದಶಕಗಳ ಹಿಂದಿನಿಂದಲೂ ಹೊಸ ಪರಿಕಲ್ಪನೆಯನ್ನು ಸೃಷ್ಠಿಸುತ್ತಿದೆ ಮತ್ತು ಹೊಸ ಜಾಗತಿಕ ಕಲ್ಪನೆಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಜಾಗತಿಕ ಚಿಲ್ಲರೆ ವ್ಯಾಪಾರದ ಮುಂಚೂಣಿಯಲ್ಲಿ ರಿಲಯನ್ಸ್, ಹ್ಯಾಮ್ಲೀಸ್ ಬ್ರಾಂಡ್ ಮತ್ತು ವ್ಯವಹಾರದ ವಿಶ್ವಾದ್ಯಂತ ಸ್ವಾಧೀನಪಡಿಸಿಕೊಂಡಿದೆ ಎಂದರು.

ಹ್ಯಾಮ್ಲೀಸ್ 1881 ರಲ್ಲಿ ಲಂಡನ್ ಪ್ರಮುಖ ರೆಜೆಂಟ್ ಸ್ಟ್ರೀಟ್‌ನಲ್ಲಿ ಮೊದಲ ಶಾಪ್ ಅನ್ನು ತೆರೆಯಿತು. ಈ ಅಂಗಡಿಯು 54,000 ಚದರ ಅಡಿ, ಏಳು ಮಹಡಿಗಳನ್ನು ಹೊಂದಿದ್ದು, 50,000 ಕ್ಕಿಂತಲೂ ಹೆಚ್ಚಿನ ಆಟಿಕೆಗಳು ಇಲ್ಲಿ ಮಾರಾಟಕ್ಕಿದೆ. ಇದು ಲಂಡನ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಪ್ರತಿವರ್ಷ 5 ದಶಲಕ್ಷ ಪ್ರವಾಸಿಗರು ಈ ಅಂಗಡಿಗೆ ಬರುತ್ತಾರೆ. ಇಲ್ಲಿ ಪ್ರಪಂಚದಾದ್ಯಂತವಿರುವ ಮಕ್ಕಳು ಮತ್ತು ಹದಿಹರೆಯದವರಿಗಾಗಿ ವರ್ಷಪೂರ್ತಿ ಈವೆಂಟ್ ಗಳು, ಮೆರವಣಿಗೆಗಳು, ಪ್ರದರ್ಶನಗಳು ಇರುತ್ತದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ