ಏಕತಾ ಪ್ರತಿಮೆ ಅನಾವರಣ; ಲೋಹಪುರುಷನ ಪ್ರತಿಮೆಯ ವಿಡಿಯೋ
Team Udayavani, Oct 31, 2018, 11:10 AM IST
ಅಹಮದಾಬಾದ್: ಭಾರತದ ಇತಿಹಾಸವನ್ನು ನಾವು ಇಂದು ನೆನಪಿಸಿಕೊಳ್ಳಬೇಕಾಗಿದೆ. ಈ ದಿನವನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನವಾಗಿದೆ. ರಾಜರ ಆಳ್ವಿಕೆಯಲ್ಲಿದ್ದ 550 ಪ್ರಾಂತ್ಯಗಳನ್ನು ಒಗ್ಗೂಡಿಸಿ ಸಂಯುಕ್ತ ಭಾರತ ಕಟ್ಟಿದ ಲೋಹ ಪುರುಷ ಪಟೇಲ್. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬುಧವಾರ ಏಕತಾ ದಿವಸವನ್ನು ಆಚರಿಸಲಾಗುತ್ತಿದೆ. ಅಲ್ಲದೇ ಸರ್ದಾರ್ ಪಟೇಲರ ವಿಶ್ವದ ಅತೀ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಅವಕಾಶ ದೊರಕಿರುವುದು ನನ್ನ ಪುಣ್ಯ ಎಂಬುದಾಗಿ ಭಾವಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬುಧವಾರ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 143ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಗುಜರಾತ್ ನ ಕೆವಾಡಿಯಾ ಗ್ರಾಮದ ಬಳಿಯ ನರ್ಮದಾ ನದಿ ತಟದಲ್ಲಿ ನಿರ್ಮಿಸಲಾಗಿರುವ 182 ಮೀಟರ್(597) ಎತ್ತರದ ಸರ್ದಾರ್ ಪಟೇಲರ ಏಕತಾ ಪ್ರತಿಮೆಯನ್ನು ಪ್ರಧಾನಿ ಮೋದಿ ಅವರು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸರ್ದಾರ್ ಪಟೇಲ್ ಅವರು ದಿಟ್ಟತನ, ಏಕತೆಯ ಸಂಕಲ್ಪ ತೋರಿಸದಿದ್ದರೆ ಇಂದು ನಾವು ಸೋಮನಾಥ ಹಾಗೂ ಹೈದರಾಬಾದ್ ನ ಚಾರ್ ಮಿನಾರ್ ನೋಡಲು ವೀಸಾ ಹೊಂದಿರಬೇಕಿತ್ತು. ಇಂಥ ಲೋಹಪುರುಷ ಪಟೇಲರಿಗೆ ನೊರೊಂದು ನಮನಗಳು ಎಂದರು. ದೇಶದಲ್ಲಿ ಆಗಲೂ ಸಹ ನಿರಾಶಾವಾದಿಗಳು ಇದ್ದರು. ಇನ್ನು ನಾವು ಯಾರಿಗೂ ಗುಲಾಮರಾಗುವ ಅಗತ್ಯವಿಲ್ಲ ಎಂದು ಪಟೇಲರು 1947ರಲ್ಲಿ ಹೇಳಿದ್ದರು. ಇಂದಿಗೂ ಕೂಡಾ ನಾವು ಗುಲಾಮರಾಗಿ ಬದುಕಬೇಕಾಗಿಲ್ಲ ಎಂದರು. ದೇಶ ಇಂದು ತನ್ನದೇ ಇತಿಹಾಸ ನಿರ್ಮಿಸಿಕೊಂಡಿದೆ ಎಂದು ಹೇಳಿದರು.