ಸಿಧು ಬಗ್ಗೆ ಅಮರಿಂದರ್‌ ಕಿಡಿ

Team Udayavani, Aug 20, 2018, 6:00 AM IST

ನವದೆಹಲಿ: ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಿದ್ದ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಅವರು ಪಾಕ್‌ ಸೇನಾ ಮುಖ್ಯಸ್ಥ ಜನರಲ್‌ ಬಾಜ್ವಾರನ್ನು ಅಪ್ಪಿಕೊಂಡಿದ್ದಕ್ಕೆ ಇದೀಗ ಪಂಜಾಬ್‌ ಸಿಎಂ ಕ್ಯಾ. ಅಮರಿಂದರ್‌ ಸಿಂಗ್‌ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿ ದಿನ ನಮ್ಮ ಯೋಧರು ಸಾವನ್ನಪ್ಪುತ್ತಿದ್ದಾರೆ. ಈ ಮಧ್ಯೆಯೇ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಳ್ಳುವುದಕ್ಕೆ ನನ್ನ ವಿರೋಧವಿದೆ. ಕೆಲವು ತಿಂಗಳುಗಳ ಹಿಂದೆ ನನ್ನದೇ ರೆಜಿಮೆಂಟ್‌ನ ಒಬ್ಬ ಮೇಜರ್‌ ಹಾ ಗೂ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ. ಪ್ರತಿ ನಿತ್ಯವೂ ಯಾರಿಗಾದರೂ ಗುಂಡು ತಗಲುತ್ತಿದೆ. ಗುಂಡು ಹೊಡೆಯುವವ ಅಥವಾ ಗುಂಡು ಹೊಡೆಯುವುದಕ್ಕೆ ಆದೇಶ ನೀಡುವ ಪಾಕ್‌ ಸೇನಾ ಮುಖ್ಯಸ್ಥರೇ ಇದಕ್ಕೆ ಹೊಣೆ ಎಂದು ಅಮರಿಂದರ್‌ ಸಿಂಗ್‌ ಹೇಳಿದ್ದಾರೆ.

ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಿದ್ದು ಸಿಧು ವೈಯಕ್ತಿಕ ನಿರ್ಧಾರ. ಅವರ ಈ ನಿರ್ಧಾರಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಪಾಕ್‌ ಆಕ್ರಮಿತ ಕಾಶ್ಮೀರ ಅಧ್ಯಕ್ಷ ಮಸೂದ್‌ ಖಾನ್‌ ಪಕ್ಕ ಸಿಧು ಕುಳಿತ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅಮರಿಂದರ್‌, ಬಹುಶಃ ಸಿಧುಗೆ ಅವರು ಯಾರು ಎಂದು ಗೊತ್ತಿರಲಿಕ್ಕಿಲ್ಲ ಎಂದಿದ್ದಾರೆ. ಶನಿವಾರ ಪಾಕಿಸ್ತಾನದಲ್ಲಿ ನಡೆದ ಇಮ್ರಾನ್‌ ಖಾನ್‌ ಪ್ರಮಾಣ ವಚನದಲ್ಲಿ ಭಾಗವಹಿಸಿ, ಪಾಕ್‌ ಆಕ್ರಮಿತ ಕಾಶ್ಮೀರದ ಪ್ರಧಾನಿ ಬಳಿ ಕುಳಿತಿದ್ದು ಹಾಗೂ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡಿದ್ದು ಭಾರಿ ಟೀಕೆಗೆ ಗುರಿಯಾಗಿತ್ತು.

ಸಿಧು ಸಮರ್ಥನೆ: ಈ ಮಧ್ಯೆ ಸಿಧು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ಬಂದು ನಾವು ಒಂದೇ ಸಂಸ್ಕೃತಿಯವರು ಮತ್ತು ಗುರುನಾನಕ್‌ರ 550ನೇ ಪ್ರಕಾಶ ಪರ್ವದಂದು ನಾವು ಕರ್ತರ್‌ಪುರ ಗಡಿ ತೆರೆಯುತ್ತೇವೆ ಎಂದು ಹೇಳಿದಾಗ ನಾನು ತಬ್ಬಿಕೊಳ್ಳದೇ ಇರಲು ಹೇಗೆ ಸಾಧ್ಯ? ಅಲ್ಲದೆ, ನಾನು ಅಲ್ಲಿಗೆ ಅತಿಥಿಯಾಗಿ ಹೋಗಿದ್ದೇನೆ. ನನ್ನನ್ನು ಎಲ್ಲಿ ಕುಳಿತುಕೋ ಎಂದು ಹೇಳುತ್ತಾರೋ ಅಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಸಿಧು ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ