ಐಸಿಸಿ ವಿಶ್ವ ಇಲೆವನ್ ತಂಡದಲ್ಲಿ ಅಫ್ರಿದಿ, ಮಲಿಕ್
Team Udayavani, Apr 20, 2018, 7:00 AM IST
ದುಬೈ: ಪಾಕಿಸ್ಥಾನಿ ಆಟಗಾರರಾದ ಶಾಹಿದ್ ಅಫ್ರಿದಿ, ಶೋಯಿಬ್ ಮಲಿಕ್ ಮತ್ತು ಶ್ರೀಲಂಕಾದ ತಿಸರ ಪೆರೆರ ಅವರು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಐಸಿಸಿ ವಿಶ್ವ ಇಲೆವನ್ ಟಿ20 ತಂಡವನ್ನು ಪ್ರತಿನಿಧಿಸಲಿದ್ದಾರೆ. ಇದು ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೇ 31ರಂದು ನಡೆಯಲಿರುವುದಾಗಿ ಐಸಿಸಿ ಗುರುವಾರ ಘೋಷಿಸಿದೆ.
ಕಳೆದ ವರ್ಷ ಇರ್ಮ ಮತ್ತು ಮರಿಯಾ ಚಂಡಮಾರುತಕ್ಕೆ ತತ್ತರಿಸಿ ಹಾನಿಗೊಳಗಾಗಿರುವ ವೆಸ್ಟ್ ಇಂಡೀಸಿನ ಪ್ರಮುಖ ಕ್ರಿಕೆಟ್ ಸ್ಟೇಡಿಯಂಗಳ ಮರು ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಈ ಪಂದ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಐಸಿಸಿ ತಿಳಿಸಿದೆ.
ಅಫ್ರಿದಿ ಮತ್ತು ಮಲಿಕ್ 2009ರಲ್ಲಿ ನಡೆದಿದ್ದ ಐಸಿಸಿ ವರ್ಲ್ಡ್ ಟಿ20ಯಲ್ಲಿ ಪಾಕಿಸ್ಥಾನ ತಂಡವನ್ನು ಪ್ರತಿನಿಧಿಸಿದ್ದರು. ಪೆರೆರ ಅವರೂ 2014ರ ಢಾಕಾದಲ್ಲಿ ನಡೆದ ಐಸಿಸಿ ವರ್ಲ್ಡ್ ಟಿ20ಯಲ್ಲಿ ಪ್ರಶಸ್ತಿ ಜಯಿಸಿದ್ದ ಶ್ರೀಲಂಕಾ ತಂಡದಲ್ಲಿದ್ದರು.
ಇಂಥದ್ದೊಂದು ಅವಕಾಶ ದೊರಕಿರುವುದಕ್ಕೆ ನಾನು ವಿನೀತನಾಗಿದ್ದೇನೆ. ಕ್ರಿಕೆಟ್ ಎನ್ನುವುದೊಂದು ದೊಡ್ಡ ಕುಟುಂಬವಿದ್ದಂತೆ. ಎಷ್ಟೇ ಕಷ್ಟವಾದರೂ ನಾವು ಪರಸ್ಪರ ಆಡುತ್ತೇವೆ. ಕ್ರಿಕೆಟ್ ಆಡುವ ನಮ್ಮ ಗುಂಪಿನಲ್ಲಂತೂ ಹೆಬ್ಬಯಕೆಗಳಿವೆ… ಎಂದು ಅಫ್ರಿದಿ ಹೇಳಿದರು.
ಐಸಿಸಿ ವಿಶ್ವ ಇಲೆವೆನ್ ತಂಡವನ್ನು ಇಂಗ್ಲೆಂಡಿನ ಎವೋನ್ ಮಾರ್ಗನ್ ಮುನ್ನಡೆಸಲಿದ್ದಾರೆ. ವೆಸ್ಟ್ ಇಂಡೀಸ್ ತಂಡದಿಂದ ನಿಷೇಧಕ್ಕೊಳಗಾಗಿದ್ದ ಆ್ಯಂಡ್ರೆ ರಸೆಲ್ ಅವರೂ ಈ ದೇಣಿಗೆ ಸಂಗ್ರಹ ಪಂದ್ಯದಲ್ಲಿ ಪಾಲ್ಗೊಳ್ಳುವುದಕ್ಕಾಗಿ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.