ವಿಂಬಲ್ಡನ್: ಆಟ ಮುಗಿಸಿದ ಮುಗುರುಜಾ
Team Udayavani, Jul 7, 2018, 6:00 AM IST
ಲಂಡನ್: ಹಾಲಿ ಚಾಂಪಿಯನ್ ಗಾರ್ಬಿನ್ ಮುಗುರುಜಾ ವಿಂಬಲ್ಡನ್ ವನಿತಾ ಸಿಂಗಲ್ಸ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಬೆಲ್ಜಿಯಂನ ವಾನ್ ಯುಟ್ವಾಂಕ್ 5-7, 6-2, 6-1 ಅಂತರದಿಂದ ಮುಗುರುಜಾಗೆ ಆಘಾತವಿಕ್ಕಿದರು. ಅಮೆರಿಕನ್ ಆಟಗಾರ್ತಿ ಮ್ಯಾಡಿಸನ್ ಕೀಸ್ ಅವರನ್ನು ರಶ್ಯದ ಅರ್ಹತಾ ಆಟಗಾರ್ತಿ ಎವೆನಿಯಾ ರೊಡಿನಾ 7-5, 5-7, 6-4 ಅಂತರದಿಂದ ಹಿಮ್ಮೆಟ್ಟಿಸಿದರು.
ಮುಗುರುಜಾ ಹಾಗೂ ಮ್ಯಾಡಿಸನ್ ಕೀಸ್ ನಿರ್ಗಮನದೊಂದಿಗೆ ವನಿತಾ ಟಾಪ್-10 ಹಂತದ ಇಬ್ಬರು ಆಟಗಾರ್ತಿಯರಷ್ಟೇ ಸ್ಪರ್ಧೆ ಯಲ್ಲಿ ಉಳಿದುಕೊಂಡಂತಾಗಿದೆ. ಇವರೆಂದರೆ ಸಿಮೋನಾ ಹಾಲೆಪ್ (1) ಮತ್ತು ಕ್ಯಾರೋಲಿನಾ ಪ್ಲಿಸ್ಕೋವಾ (7).
ಪುರುಷರ ಸಿಂಗಲ್ಸ್ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ಅಮೆರಿಕದ ಟಯ್ಲರ್ ಫ್ರಿಟ್ಜ್ ವಿರುದ್ಧ ಸೋಲಿನ ದವಡೆಯಿಂದ ಪಾರಾಗಿ 3ನೇ ಸುತ್ತು ತಲುಪುವಲ್ಲಿ ಯಶಸ್ವಿ ಯಾದರು. ಜ್ವರೇವ್ ಜಯದ ಅಂತರ 6-4, 7-5, 6-7 (0-7), 6-1, 6-2.
ಬೋಪಣ್ಣ ಜೋಡಿ ನಿರ್ಗಮನ
ರೋಹನ್ ಬೋಪಣ್ಣ-ಫ್ರಾನ್ಸ್ನ ಎಡ್ವರ್ಡ್ ರೋಜರ್ ವೆಸಲಿನ್ ಪುರುಷರ ಡಬಲ್ಸ್ ದ್ವಿತೀಯ ಸುತ್ತಿನ ಮುಖಾಮುಖೀಯ ನಡು ವಲ್ಲೇ ಪಂದ್ಯ ತ್ಯಜಿಸಿದ್ದಾರೆ. ಬೋಪಣ್ಣ ಗಾಯಾಳಾದುದೇ ಇದಕ್ಕೆ ಕಾರಣ. ಆಗ ಫ್ರೆಡ್ರಿಕ್ ನೀಲ್ಸೆನ್-ಜೋ ಸ್ಯಾಲಿಸ್ಬರಿ ವಿರುದ್ಧ ಬೋಪಣ್ಣ ಜೋಡಿ 4-6, 6-7 (4), 1-2 ಅಂತರದ ಹಿನ್ನಡೆಯಲ್ಲಿತ್ತು. ಇದೇ ಮೊದಲ ಸಲ ವಿಂಬಲ್ಡನ್ ಡಬಲ್ಸ್ ಆಡುತ್ತಿರುವ ಭಾರತದ ವಿಷ್ಣುವರ್ಧನ್-ಎನ್. ಶ್ರೀರಾಮ್ ಬಾಲಾಜಿ 2ನೇ ಸುತ್ತು ತಲುಪಿದ್ದಾರೆ.