
ಪ್ರತಿಮೆ ಹಿಂದೆ ಬಿಜೆಪಿಯ ರಾಜಕೀಯ ಲೆಕ್ಕಾಚಾರ: ಡಿ.ಕೆ.ಶಿವಕುಮಾರ್
Team Udayavani, Nov 12, 2022, 6:20 AM IST

ಬೆಂಗಳೂರು: ಕೆಂಪೇಗೌಡ ಅವರ ಪ್ರತಿಮೆಯನ್ನು ಸರ್ಕಾರ ನಿರ್ಮಾಣ ಮಾಡುವ ಬದಲು ವಿಮಾನ ನಿಲ್ದಾಣ ಆಡಳಿತ ಮಂಡಳಿಯವರೇ ಮಾಡಬಹುದಾಗಿತ್ತು. ಆದರೆ ರಾಜಕೀಯ ಲಾಭಕ್ಕಾಗಿ ಬಿಜೆಪಿ ಸರ್ಕಾರ ಪ್ರತಿಮೆ ನಿರ್ಮಾಣ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ವಿಮಾನ ನಿಲ್ದಾಣ ಆಡಳಿತ ಮಂಡಳಿಯವರಿಗೆ 50-60 ಕೋಟಿ ರೂ. ವೆಚ್ಚ ಮಾಡುವುದು ದೊಡ್ಡ ವಿಚಾರವಲ್ಲ ಎಂದು ಈ ಹಿಂದೆ ಹೇಳಿದ್ದೆ. ಆದರೆ ಬಿಜೆಪಿ ಮುಖಂಡರು ಅವರದೇ ಆದ ಲೆಕ್ಕಾಚಾರ ಹಾಕಿಕೊಂಡು ಮಾಡುತ್ತಿದ್ದಾರೆ. ಸರ್ಕಾರದ ಹಣ ಹೇಗೆ ಉಳಿಸಬೇಕು, ಕಾಮಗಾರಿ ಹೇಗೆ ಮಾಡಿಸಬೇಕು ಎಂಬ ಬಗ್ಗೆ ಸಾಮಾನ್ಯ ಪರಿಜ್ಞಾನ ಇರಬೇಕು. ಇವರು ತಾವು ಹೆಸರು ಮಾಡಿಕೊಳ್ಳಲು ಈ ರೀತಿ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ತಮ್ಮ ಹಾಗೂ ಪಕ್ಷದ ವೈಭವೀಕರಣಕ್ಕೆ ಯಾವ ರೀತಿ ಹಣ ಖರ್ಚು ಮಾಡಲಾಗುತ್ತಿದೆ ಎಂಬುದರ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ. ಅವರು ಯಾವ ರೀತಿಯಾದರೂ ಜನರನ್ನು ಕರೆದುಕೊಂಡು ಹೋಗಲಿ, ಆದರೆ ಇವರನ್ನು ಕಿತ್ತೂಗೆಯಲು ಜನ ಸಂಕಲ್ಪ ಮಾಡಿದ್ದು, ಅದು ಆಗಲಿದೆ ಎಂದು ಹೇಳಿದರು.
ಭ್ರಷ್ಟ ಆಡಳಿತವನ್ನು ಸ್ವತ್ಛ ಮಾಡಬೇಕಿದೆ. ಆ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದವರು ಬರೆದ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡುತ್ತಾರೆ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಪ್ರಶ್ನೆಗಳಿಗೆ ಪ್ರಧಾನಿಗಳು ಉತ್ತರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಹೋರಾಟ ರೂಪಿಸಬೇಕು ಎಂಬುವುದರ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
