ಫ್ಯಾಷನ್‌ ಸ್ಟ್ರೀಟ್‌ಗೆ ಒಂದು ಸುತ್ತು

Team Udayavani, May 17, 2019, 6:00 AM IST

ಮುಂಬೈ ನಗರಿ ಗಗನಚುಂಬಿ ಕಟ್ಟಡಗಳ ಒಂದು ಸುಂದರವಾದ ಲೋಕ. ಇಲ್ಲಿ ರಾತ್ರಿಯಲ್ಲೂ ಕತ್ತಲು ಕವಿಯುವುದಿಲ್ಲ. ಅತ್ತಿತ್ತ ಓಡಾಡುವ, ನಿಂತಲ್ಲೇ ಇರುವ, ಕಣ್ಣುಮುಚ್ಚಾಲೆಯಾಡುವ ವೈವಿಧ್ಯಮಯವಾದ ಬೆಳಕಿನದೇ ಹೂಮಳೆ. ಹಾಗಾಗಿ, ತಿಂಗಳೂರಿನ ಚಂದ್ರನೂ ಊರಿನಲ್ಲಿರು ವಂತೆ ಇಲ್ಲಿ ಮನಮೋಹಕವಾಗಿ ಕಾಣಿಸುವುದಿಲ್ಲ. ರಾತ್ರಿಯ ಹೊತ್ತಿನಲ್ಲಿ ಲೋಕಲ್‌ ರೈಲಿನಲ್ಲಿ ಪ್ರಯಾಣಿಸುವಾಗ ಹೊರಗಿನ ಜಗತ್ತನ್ನು ನೋಡುವುದೆಂದರೆ ಕಣ್ಣುಗಳಿಗೆ ಹಬ್ಬ. ಬಾನಿನತ್ತ ಮುಖ ಮಾಡಿರುವ ಬಹುಮಹಡಿಗಳ ಕಟ್ಟಡಗಳಲ್ಲಿ ಬದುಕು ಕಟ್ಟಿಕೊಂಡಿರುವ ಮನೆಮನೆಗಳ ಬೆಳಕಿನ ಕಿಂಡಿಗಳನ್ನು ನೋಡಿದರೆ, ತಾರಾಸಂಕುಲವೇ ಧರೆಗಿಳಿದಂತೆ ಭಾಸವಾಗುತ್ತವೆ.

ನಾನು ವಾಸಿಸುವ ಕಟ್ಟಡದಲ್ಲಿ ಒಟ್ಟು ಮೂವತ್ತೂಂಬತ್ತು ಮನೆಗಳಿವೆ. ಅದರಲ್ಲಿ ಐದಾರು ಮನೆಗಳಲ್ಲಿ ಮಾತ್ರ ಊರಿನವರು ವಾಸಿಸುತ್ತಿದ್ದಾರೆ. ಮುಂಬೈಗೆ ಬಂದ ಆರಂಭದ ದಿನಗಳಲ್ಲಿ ನನ್ನ ಜೊತೆಗೆ ಹೆಚ್ಚು ಮಾತನಾಡುತ್ತಿದ್ದವರು ಪಕ್ಕದ ಮನೆಯ ಲೀನಾಬಾಯಿ. ಇವರು ತುಳು-ಕನ್ನಡ ಮಾತನಾಡುವ ನಮ್ಮೂರಿನವರು. ಆದರೆ ಲೀನಾಬಾಯಿ ನಿತ್ಯ ಆಫೀಸಿಗೆ ಕೆಲಸಕ್ಕೆ ಹೋಗುತ್ತಿದ್ದುದರಿಂದ ಭಾನುವಾರದ ದಿನ ಮಾತ್ರ ಅವರೊಂದಿಗೆ ಹರಟೆ ಹೊಡೆಯಲು ಅವಕಾಶ ಸಿಗುತ್ತಿತ್ತು. ಉಳಿದ ದಿನಗಳಲ್ಲಿ ರಾತ್ರಿ ಕೆಲಸದಿಂದ ಬಂದವರು ಕರೆಗಂಟೆ ಒತ್ತಿ ಮನೆಯ ಹೊಸ್ತಿಲಲ್ಲಿ ನಿಂತುಕೊಂಡು,

“”ಇವತ್ತೇನು ಸ್ಪೆಷಲ್‌ ಮಾಡಿದೆ…!” ಎಂದು ಕೇಳಿ ಅವರಿಗೂ ಬೇಕು ಅನಿಸಿದರೆ “”ಸ್ವಲ್ಪ ನನಗೂ ಕೊಡು” ಎಂದು ಕೇಳಿ ತೆಗೆದುಕೊಂಡು ಹೋಗುತ್ತಿದ್ದರು. ಅವರ ಮನೆಯಲ್ಲಿ ಹೊಸರುಚಿ ಅಥವಾ ವಿಶೇಷ ದಿನಗಳಲ್ಲಿ ಮಾಡಿದ ಅಡುಗೆಯನ್ನು ನನಗೂ ಕಳುಹಿಸಿ ಕೊಡುತ್ತಿದ್ದರು.

ಭಾನುವಾರದ ದಿನ ಬಿರಿಯಾನಿ ಪಲಾವ್‌ ಹೀಗೆ ಅವರಿಗೆ ಗೊತ್ತಿರುವ ಅಡುಗೆಗಳನ್ನೆಲ್ಲ ನಾನು ಕೇಳಿ ತಿಳಿದುಕೊಳ್ಳುತ್ತಿದ್ದೆ. ಸದಾ ಹಸನ್ಮುಖೀಯಾಗಿರುವ ಲೀನಾಬಾಯಿ ಮಾತಾಡಲು ಶುರುವಿಟ್ಟುಕೊಂಡರೆ ಬೇಗ ಮುಗಿಯಲಾರದು. ಅವರ ಆಫೀಸಿನಲ್ಲಿ, ಲೋಕಲ್‌ ರೈಲಿನಲ್ಲಿ ಏನೆಲ್ಲ ನಡೆಯಿತೋ ಅದನ್ನೆಲ್ಲ ಮುಚ್ಚುಮರೆಯಿಲ್ಲದೆ ಹೇಳುತ್ತಿದ್ದರು. ಆ ಸಮಯದಲ್ಲಿ ಅವರು ಹೇಳುವ ಎಲ್ಲ ಕಥೆಗಳನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದೆ. ಕೆಲವರನ್ನು ಯಾಮಾರಿಸಿದ ಕಥೆಯನ್ನೂ ಬಹಳ ಸ್ವಾರಸ್ಯಕರವಾಗಿ ಹೇಳುತ್ತಿದ್ದರು.

ಅಷ್ಟಮಿ, ಚೌತಿ, ಹೋಳಿ ಮತ್ತು ದೀಪಾವಳಿಯ ಸಂದರ್ಭದಲ್ಲಿ ಕಸ ಗುಡಿಸುವವಳು ಬಕ್ಷೀಸ್‌ ಕೇಳಿದರೆ, ಒಂದು ಪೈಸೆಯೂ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಬಿಡುತ್ತಿದ್ದರು. ಆದರೆ, ರûಾಬಂಧನದ ದಿನ ಪ್ರತಿವರ್ಷವೂ ಅವರ ಪರಿಚಿತರಿಗೆಲ್ಲ ಬಿಡದೆ ರಾಖೀಯನ್ನು ಕಟ್ಟುತ್ತಿದ್ದರು. ಸೀರೆ, ಚೂಡಿದಾರ್‌, ಪರ್‌ಫ್ಯೂಮ್‌, ವಾಚ್‌ ಹೀಗೆ ಆ ದಿನ ಅವರಿಗೆ ಸಿಗುವಂಥ ಉಡುಗೊರೆಗಳನ್ನೆಲ್ಲ ತಂದು ಖುಷಿಯಿಂದ ಪ್ರದರ್ಶಿಸುತ್ತಿದ್ದರು. “”ಓಹ್‌! ನಿಮಗೆ ತುಂಬ ಮಂದಿ ಅಣ್ಣತಮ್ಮಂದಿರಿದ್ದಾರಲ್ವೇ?” ಎಂದು ಎಲ್ಲರೂ ನಗುತ್ತಿದ್ದರು.

ಲೀನಾಬಾಯಿದ್ದು ಬಹಳ ಸಂಕೀರ್ಣ ವ್ಯಕ್ತಿಣ್ತೀ. ಕೆಲವೊಂದು ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗುತ್ತಿತ್ತು. ಆಫೀಸಿನಿಂದ ದಿನಾ ಮನೆಗೆ ಬರುವಾಗ ಲೋಕಲ್‌ ರೈಲಿನಲ್ಲಿ ಖರೀದಿಸಿದ ಕೈಬಳೆ, ಸರ, ಬಿಂದಿ, ಬಣ್ಣಬಣ್ಣದ ಬೆಂಡೋಲೆ ಹೀಗೆ ಬೇರೆ ಬೇರೆ ವಸ್ತುಗಳನ್ನು ತಂದು ತೋರಿಸುತ್ತಿದ್ದರು. ನನಗೆ ಬೇಕಾದವುಗಳನ್ನು ಅದರ ಬೆಲೆಯನ್ನಿತ್ತು ಖರೀದಿಸುತ್ತಿದ್ದೆ. ಇದನ್ನು ಗಮನಿಸಿದ ಎರಡನೆಯ ಮಹಡಿಯಲ್ಲಿರುವ ಶ್ಯಾಮಲಕ್ಕ, “ಲೀನಾಬಾಯಿಗೆ ನೀವು ಮುಂಬೈಗೆ ಬಂದ ಮೇಲೆ ಒಳ್ಳೆಯ ಕಮಾಯಿ ಮಾರಾಯೆÅà. ಧರ್ಮಕ್ಕೆ ಸಿಕ್ಕಿದ್ದನ್ನು ನೀವು ಕಾಸು ಕೊಟ್ಟು ಕೊಂಡುಕೊಳ್ಳುತ್ತಿದ್ದೀರಿ!” ಎಂದು ತಮಾಷೆಯಿಂದ ಹೇಳುತ್ತಿದ್ದರು. ಸದಾ ಅವರಿವರ ಸುದ್ದಿಯನ್ನೇ ಹೇಳುತ್ತ ತಿರುಗುವ ಶ್ಯಾಮಲಕ್ಕನ ಮಾತುಗಳನ್ನು ನಾನು ಹೆಚ್ಚು ಗಮನ ಕೊಡುತ್ತಿರಲಿಲ್ಲ. ಒಂದೆರಡು ವರ್ಷದ ನಂತರ ಲೀನಾಬಾಯಿ ಕೆಲಸ ಮಾಡುತ್ತಿದ್ದ ಕಂಪೆನಿ ಮುಚ್ಚಿತು. ಬೇರೆಲ್ಲಿಯೂ ಕೆಲಸ ಸಿಗಲಿಲ್ಲವೋ ಅಥವಾ ಮನಸ್ಸಿರಲಿಲ್ಲವೋ ಅವರು ಮತ್ತೆ ಕೆಲಸಕ್ಕೆ ಹೋಗಲಿಲ್ಲ. ಅದೇ ಅವರ ಮಾನಸಿಕ ಸ್ಥಿತಿಯ ಮೇಲೂ ಅಡ್ಡ ಪರಿಣಾಮ ಬೀರಿತೇನೋ! ಅವರ ಸ್ವಭಾವ ದಿನದಿಂದ ದಿನಕ್ಕೆ ಬದಲಾಗತೊಡಗಿತು.

ಕಸವನ್ನು ಇತರರ ಮನೆಬಾಗಿಲಿಗೆ ಮೆಲ್ಲನೆ ತಂದು ಹಾಕುವುದು, ಮಹಡಿಯಿಂದ ಕೆಳಗಿಳಿಯುವ ಮೆಟ್ಟಿಲಿಗೆ ನೀರೆರೆಯುವುದು, ಯಾರಾದರೂ ಕೆಳಗಡೆ ನಡೆದು ಹೋಗುತ್ತಿದ್ದರೆ ಅವರ ತಲೆಯ ಮೇಲೆ ಕಸವನ್ನು ಎಸೆಯುವುದು, ಕೊಳಕು ನೀರನ್ನು ಹೊಯ್ಯುವುದು, ಮಕ್ಕಳ ಪರೀಕ್ಷೆಯ ಸಂದರ್ಭದಲ್ಲಿ ಕರ್ಕಶ ಹಿಂದಿ ಇಂಗ್ಲಿಷ್‌ ಹಾಡುಗಳನ್ನು, ಇಡೀ ಕಟ್ಟಡಕ್ಕೆ ಕೇಳಿಸುವಂತೆ ಇಡುವುದು. ಹೀಗೆ ನೆರೆಹೊರೆಯವರಿಗೆ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ಕೊಡಲಾರಂಭಿಸಿದರು. ನಿತ್ಯ ಅಕ್ಕಪಕ್ಕದ ಮನೆಯವರ ದೂರಿನಿಂದ ಬೇಸತ್ತ ಲೀನಾ ಬಾಯಿಯ ಪತಿ, ತಮ್ಮ ವಾಸಸ್ಥಾನವನ್ನು ಬೇರೆಡೆಗೆ ಸ್ಥಳಾಂತರಿಸಿದರು.

ಮಹಿಳಾ ಬೋಗಿಯಲ್ಲಿಯೇ ವ್ಯಾಪಾರ ಹೆಚ್ಚು
ಬೋಗಿಯಲ್ಲಿ ಮಹಿಳೆಯರ ಬೇಕುಬೇಡಗಳನ್ನು ಗಮನದಲ್ಲಿರಿಸಿಕೊಂಡೇ ವ್ಯಾಪಾರಿಗಳು ವಸ್ತುಗಳನ್ನು ತರುತ್ತಾರೆ. ಅವುಗಳನ್ನು ಕಂಡೊಡನೆ ಮಹಿಳೆಯರು ಆಕರ್ಷಿತರಾಗುವ ರೀತಿಯನ್ನು ನೋಡುವಾಗ ಕೆಲವೊಮ್ಮೆ ಲೀನಾಬಾಯಿ ನೆನಪಾಗುತ್ತಾರೆ. ನಮಗೆ ಅರಿವಿಲ್ಲದ ಹಾಗೆಯೇ ಒಂದು ಫ್ಯಾಷನ್‌ ಜಗತ್ತೇ ಲೋಕಲ್‌ ರೈಲಿನೊಳಗಿರುವುದು ಅಚ್ಚರಿ ತರಿಸುತ್ತದೆ. ಪ್ರಯಾಣಿಕರಿಗೆ ನುಸುಳುವುದಕ್ಕೂ ಜಾಗ ಇಲ್ಲ. ಆದರೆ, ವ್ಯಾಪಾರಿಗಳು ಒಂದು ದೊಡ್ಡ ಶಾಪಿಂಗ್‌ ಮಹಲನ್ನೇ ಹಿಡಿದುಕೊಂಡು ಇಡೀ ರೈಲಿನೊಳಗಡೆ ಸುತ್ತಾಡುತ್ತಿರುತ್ತಾರೆ. ಅಂಗಡಿಗಳಲ್ಲಿ, ಮಹಲಿನಲ್ಲಿ ಐನೂರು ರೂಪಾಯಿಯಷ್ಟು ಬೆಲೆ ಇರುವಂಥ ವಸ್ತುಗಳು ಇಲ್ಲಿ ನೂರು ರೂಪಾಯಿಗೆ ಸಿಗುತ್ತವೆ. ಈ ಫ್ಯಾಷನ್‌ ಹಳೆಯದಾಯಿತು. ಇನ್ನು ತೊಡುವುದು ಬೇಡ ಎಂದು ಅನಿಸಿದ್ದಲ್ಲಿ ರೈಲಿನಲ್ಲಿ ಕೊಂಡುಕೊಂಡ ನಕಲಿ ಸೆಟ್‌ಗಳ ಎಕ್ಸ್‌ಪೈರಿ ಡೇಟನ್ನು ಮಹಿಳೆಯರೇ ನಿರ್ಧರಿಸುತ್ತಾರೆ. ಕಡ್ಜತ್‌ನಿಂದ ವಿ.ಟಿ., ವಿ.ಟಿ.ಯಿಂದ ಕಡ್ಜತ್‌ನವರೆಗೆ ಮುಂಜಾನೆಯಿಂದ ಸಂಜೆಯತನಕ ಪ್ರತಿಯೊಬ್ಬನಿಗೂ ಕಡಿಮೆಯೆಂದರೂ ದಿನಕ್ಕೆ ಮೂರು ಸಾವಿರ ರೂಪಾಯಿಗಳಷ್ಟು ವ್ಯಾಪಾರ ಆಗುತ್ತದೆಯಂತೆ!

ಪುರುಷರು ಉಪಯೋಗಿಸುವ ಪರ್ಸು, ಕೀಚೈನ್‌, ಬೆಲ್ಟ್ ಹಿಡಿದುಕೊಂಡು ವ್ಯಾಪಾರ ನಡೆಸುವವರೂ ಮಹಿಳಾ ಬೋಗಿಗೆ ಬರುತ್ತಾರೆ. “”ನೀವು ಇಲ್ಲಿ ಯಾಕೆ ಬರುತ್ತೀರಾ? ಪುರುಷರ ಬೋಗಿಯಲ್ಲಿ ಇಲ್ಲಿಗಿಂತ ಜಾಸ್ತಿ ಮಾರಾಟ ಆಗುವುದಿಲ್ಲವೆ” ಎಂದು ಕೇಳಿದರೆ ಅವರು, “”ಇಲ್ಲ ಮೇಡಂ, ಪುರುಷರು ಇಂಥದ್ದರಲ್ಲಿ ಹೆಚ್ಚು ಆಸಕ್ತಿ ವಹಿಸುವುದಿಲ್ಲ. ತೀರ ಅಗತ್ಯ ಅನಿಸಿದರೆ ಮಾತ್ರ ಪರ್ಸ್‌ ಅಥವಾ ಬಾಚಣಿಗೆ ಕೊಳ್ಳುತ್ತಾರೆ. ಅದನ್ನು ಕೂಡ ಆಚೀಚೆ ತಿರುಗಿಸಿ ನೋಡಿ ಒಮ್ಮೆ ಬಾಚಿ ನೋಡಿಯೂ ತೆಗೆದುಕೊಳ್ಳಬೇಕೋ ಬೇಡವೋ ಎಂಬ ಗೊಂದಲಕ್ಕೆ ಬೀಳುತ್ತಾರೆ. “ಉತಾರ್ನೆàಕಾ ಹೈ. ಜಲ್ದೀ ಲೇಲೋ ಬಾಯಿಸಾಬ್‌…’ ಅಂತ ಅಂಗಲಾಚಿದ ಮೇಲೆಯೇ ತಮಗೆ ಆ ವಸ್ತು ಬೇಕೋ ಬೇಡವೋ ಎಂದು ನಿರ್ಧರಿಸುತ್ತಾರೆ. ಆದರೆ, ಮಹಿಳಾ ಬೋಗಿಯಲ್ಲಿ ಹಾಗಲ್ಲ. ಎಲ್ಲವೂ ಬೇಗನೆ ಮಾರಾಟವಾಗುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಮುಂಬೈಗೆ ಬಂದವರಲ್ಲಿ ಬಹುತೇಕರು ಚರ್ಚ್‌ಗೇಟ್‌ನ ಫ್ಯಾಷನ್‌ ಸ್ಟ್ರೀಟಿಗೊಮ್ಮೆ ಭೇಟಿ ಕೊಡದಿರುವವರು ವಿರಳ. ಮಹಿಳೆ ಯರ, ಪುರುಷರ ಹೊಸ ಮಾದರಿಯ ಯಾವುದೇ ಉಡುಪು ಮೊದಲು ಅಲ್ಲಿಗೆ ಬರುತ್ತದೆ. ಸುಮಾರು ನಾಲೂ°ರಕ್ಕಿಂತಲೂ ಹೆಚ್ಚು ಅಂಗಡಿಗಳಿರುವ ಈ ಪ್ರದೇಶದಲ್ಲಿ ಚೌಕಾಶಿ ಮಾಡುವ ವಿಶೇಷ ಕಲೆಯ ಜೊತೆಗೆ, ನಾಲ್ಕಾರು ತಾಸು ಸುತ್ತುವ ತಾಳ್ಮೆಯೂ ಬೇಕು. ಕೆಲವು ಪರಿಣತರು, ಕಾಲೇಜು ಹುಡುಗಿಯರಿಗೆ ಮತ್ತು ಮಹಿಳೆಯರಿಗೆ ಬೇಕಾದ ಉತ್ತಮ ಉಡುಪುಗಳು ಫ್ಯಾಷನ್‌ ಸ್ಟ್ರೀಟ್‌ಗಿಂತ ಬಾಂದ್ರಾ ಲಿಂಕಿಂಗ್‌ ರೋಡಿನಲ್ಲಿಯೇ ಚೆನ್ನಾಗಿ ಸಿಗುತ್ತದೆ ಎಂದು ಹೇಳುತ್ತಾರೆ. ಆದರೆ, ಚರ್ಚ್‌ಗೇಟ್‌ನ ಫ್ಯಾಷನ್‌ ಸ್ಟ್ರೀಟ್‌ ಬಹಳ ದೂರವಿರುವುದರಿಂದ ನನ್ನ ಬಹುತೇಕ ಶಾಪಿಂಗ್‌ ಬಾಂದ್ರಾದಲ್ಲಿಯೇ ನಡೆಯುತ್ತದೆ.

ಮುಗಿಸುವ ಮುನ್ನ…
ಉದಯವಾಣಿಯ “ಮಹಿಳಾ ಸಂಪದ’ ದಲ್ಲಿ ಅಂಕಣ ಬರೆಯುವ ಅವಕಾಶ ಸಿಕ್ಕಿದ್ದು ಬಯಸದೆ ಬಂದ ಭಾಗ್ಯ. ನನ್ನ ಬರವಣಿಗೆಯಲ್ಲಿ ಇನ್ನಷ್ಟು ಪ್ರಬುದ್ಧತೆಯನ್ನು ಸಾಧಿಸಲು ಇದೊಂದು ಅವಕಾಶವಾಯಿತು. ಅಂಕಣ ಆರಂಭವಾದಾಗಿನಿಂದಲೂ ಒಳನಾಡಿನ, ಹೊರನಾಡಿನ ಪ್ರಿಯ ಓದುಗರು ನಿರಂತರವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸುತ್ತ ಬಂದಿರುವುದಲ್ಲದೆ, ಬರುವ ವಾರದ ಅಂಕಣದಲ್ಲಿ ಯಾವ ವಿಷಯ ಬರೆಯಲಿರುವಿರಿ ಎಂದು ಕುತೂಹಲದಿಂದ ಕೇಳುತ್ತಿದ್ದರು. ಇದರಿಂದಾಗಿ ಸಹೃದಯರೊಂದಿಗೆ ಭಾವನಾತ್ಮಕವಾದ ನಂಟಿನ ಜೊತೆಗೆ ಮಾರ್ಗದರ್ಶನವೂ ಲಭಿಸಿದೆ. ಕಾವ್ಯವೇ ನನ್ನ ಮುಖ್ಯ ಮಾಧ್ಯಮವೆಂದುಕೊಂಡಿದ್ದವಳಿಗೆ, ಲೇಖನಗಳನ್ನೂ ಬರೆಯಬಲ್ಲೆನೆಂಬ ಭರವಸೆಯನ್ನು ಈ ಅಂಕಣಗಳಿಗೆ ಬಂದ ಪ್ರತಿಕ್ರಿಯೆಗಳು ಮೂಡಿಸಿವೆ. ಉದಯವಾಣಿಯ ಸಂಪಾದಕಮಂಡಳಿಗೆ ಹೇಗೆ ಕೃತಜ್ಞತೆ ಹೇಳಲಿ !

(ಅಂಕಣ ಮುಕ್ತಾಯ)

-ಅನಿತಾ ಪಿ. ತಾಕೊಡೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ