Updated at Thu,25th May, 2017 2:59AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

15 ವರ್ಷ ಬಳಿಕ ಉತ್ತರಕ್ಕೆ ಬಿಜೆಪಿ ಸರಕಾರ‌

ಲಕ್ನೋ: ಬಿಜೆಪಿಯ ಖಟ್ಟರ್‌ ಹಿಂದುತ್ವವಾದಿ, 5 ಬಾರಿ ಸಂಸದರಾಗಿ ಆಯ್ಕೆಯಾದ ಯೋಗಿ ಆದಿತ್ಯನಾಥ್‌ ಅವರು ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ರವಿವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲಕ್ನೋದ ಕಾನ್ಶಿರಾಮ್‌ ಸ್ಮತಿ ಉಪವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಉಪಮುಖ್ಯಮಂತ್ರಿಗಳಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೇಶವ ಪ್ರಸಾದ್‌ ಮೌರ್ಯ ಹಾಗೂ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ದಿನೇಶ್‌ ಶರ್ಮಾ ಸೇರಿದಂತೆ 47 ಮಂದಿ ಸಚಿವರೂ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ವಿಶೇಷವೆಂದರೆ, ಚುನಾವಣೆ ಸಂದರ್ಭದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್‌ ನೀಡದೇ ಇದ್ದ ಬಿಜೆಪಿ ಇದೀಗ ಕ್ರಿಕೆಟಿಗ, ರಾಜಕಾರಣಿ ಮೊಹ್ಸಿನ್‌ ರಜಾ ಅವರನ್ನು ಸಂಪುಟಕ್ಕೆ ಸೇರಿಸಿದೆ. ಆದರೆ ಯೋಗಿ, ಮೌರ್ಯ, ಶರ್ಮಾ ಹಾಗೂ ಮೊಹ್ಸಿನ್‌ ಪೈಕಿ ಯಾರೂ ಶಾಸಕರಾಗಿ ಆಯ್ಕೆಯಾದವರಲ್ಲ ಎನ್ನುವುದು ಮತ್ತೂಂದು ವಿಶೇಷ.

ಕೇಸರಿ ಪಕ್ಷದ 4ನೇ ಸಿಎಂ: 44 ವರ್ಷದ ಆದಿತ್ಯನಾಥ್‌ ಅವರು 15 ವರ್ಷಗಳ ಬಳಿಕ ಉತ್ತರಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಆ ಮೂಲಕ ಕೇಸರಿ ಪಕ್ಷದ 4ನೇ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 90 ನಿಮಿಷಗಳ ಕಾಲ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಮ್‌ ನಾಯಕ್‌ ಅವರು ಸಿಎಂ, ಇಬ್ಬರು ಡಿಸಿಎಂಗಳು, ರೀಟಾ ಬಹುಗುಣ ಜೋಷಿ ಸೇರಿದಂತೆ 22 ಮಂದಿ ಸಂಪುಟ ದರ್ಜೆ ಸಚಿವರು, 9 ಮಂದಿ ಸಹಾಯಕ ಸಚಿವರು(ಸ್ವತಂತ್ರ) ಹಾಗೂ 13 ಮಂದಿ ಸಹಾಯಕ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ.


ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ, ಸಚಿವ ರಾಜನಾಥ್‌ಸಿಂಗ್‌, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಇವರಲ್ಲದೆ, ಮಾಜಿ ಸಿಎಂ ಅಖೀಲೇಶ್‌ ಯಾದವ್‌, ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಅವರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶನಿವಾರವಷ್ಟೇ ಉತ್ತರಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ್‌ ಅವರನ್ನು ಬಿಜೆಪಿ ಸಂಸದೀಯ ಪಕ್ಷದ ಸಭೆಯು ಆಯ್ಕೆ ಮಾಡುವ ಮೂಲಕ ಇಡೀ ರಾಜಕೀಯ ವಲಯದಲ್ಲೇ ಬೆರಗು ಮೂಡಿಸಿತ್ತು. ಮುಖ್ಯಮಂತ್ರಿ ಆಯ್ಕೆಯಲ್ಲಿ ಆರೆಸ್ಸೆಸ್‌ನ ಪ್ರಭಾವವಿದೆ ಎನ್ನುವ ಮಾತುಗಳೂ ಕೇಳಿಬಂದಿದ್ದವು. ಆದರೆ, ಇದನ್ನು ಆರೆಸ್ಸೆಸ್‌ ನಿರಾಕರಿಸಿದ್ದು, ಸಿಎಂ ಆಯ್ಕೆಗೂ ನಮಗೂ ಸಂಬಂಧವಿಲ್ಲ ಎಂದಿದೆ.

ಬ್ಯಾಚುಲರ್‌ ಸಿಎಂಗಳ ಕ್ಲಬ್‌ಗ ಹೊಸ ಸೇರ್ಪಡೆ: ಉತ್ತರಪ್ರದೇಶದ ಸಿಎಂ ಆಗುವ ಮೂಲಕ ಯೋಗಿ ಆದಿತ್ಯನಾಥ್‌ ಅವರು 'ಬ್ಯಾಚುಲರ್‌ ಸಿಎಂಗಳ ಕ್ಲಬ್‌'ಗೆ ಸೇರ್ಪಡೆಗೊಂಡಿದ್ದಾರೆ. ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌, ಹರಿಯಾಣದ ಮನೋಹರ್‌ ಲಾಲ್‌ ಖಟ್ಟರ್‌, ಅಸ್ಸಾಂನ ಸರ್ವಾನಂದ ಸೊನೊವಾಲ್‌, ಒಡಿಶಾದ ನವೀನ್‌ ಪಟ್ನಾಯಕ್‌ ಹಾಗೂ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಇನ್ನೂ ಅವಿವಾಹಿತರು. ಈಗ ಯೋಗಿ ಸೇರ್ಪಡೆ ಮೂಲಕ ಈ ಸಂಖ್ಯೆ 6ಕ್ಕೇರಿದಂತಾಗಿದೆ. ಪಟ್ನಾಯಕ್‌ ಮತ್ತು ಮಮತಾ ಹೊರತುಪಡಿಸಿದರೆ ಉಳಿದವರೆಲ್ಲರೂ ಬಿಜೆಪಿಗೆ ಸೇರಿದವರು.


More News of your Interest

Trending videos

Back to Top