ಋಷಿಯ ದರ್ಶನ, ಕಪಿಯ ಕ್ರಿಯಾಶಕ್ತಿಗಳ ಸಂಗಮ


Team Udayavani, Apr 27, 2021, 6:40 AM IST

ಋಷಿಯ ದರ್ಶನ, ಕಪಿಯ ಕ್ರಿಯಾಶಕ್ತಿಗಳ ಸಂಗಮ

ಹನುಮಂತ ಶ್ರೀರಾಮನ ಧೂತ. ಇವನು ಅಪ್ರತಿಮ ರಾಮ ಭಕ್ತ. ರಾಮ ಸೇವೆ ಅವನ ಬದುಕಿನ ಸೂತ್ರ. ರಾಮನಿಲ್ಲದ ಬದುಕು ಹನುಮಂತನಿಗೆ ಇಲ್ಲ. ರಾಮನ ಸಂಬಂಧ ಬಂದ ಮೇಲೆ ಮಾರುತಿ ರಾಮನ ಭಕ್ತನಾದ. ರಾಮನ ದೂತನಾದ, ರಾಮನ ಸೇವಕನಾದ.

ಶ್ರೀರಾಮನನ್ನು ನೆರಳಿನಂತೆ ಅನುಸರಿಸಿದವಳು ಸೀತೆ. ರಾಮ ಕಾರ್ಯವನ್ನು ರಾಮನ ಕೈಕಾಲುಗಳಂತೆ ಅಚ್ಚುಕಟ್ಟಾಗಿ ನಿರ್ವಹಿಸಿ ದವನು ಲಕ್ಷ್ಮಣ. ಶ್ರೀರಾಮ ಪ್ರಭಾವವನ್ನು ಗಾಳಿಯಂತೆ ವಿಶ್ವದಾ ದ್ಯಂತ ಹರಡಿದವನು ಹನುಮಂತ.

ಹನುಮಂತ ಅಂಜನಾದೇವಿಯ ಕಂದ. ಆಂಜನೇಯ ಎಂಬುವುದು ಇವನ ಇನ್ನೊಂದು ಹೆಸರು. ವಾಯವಿನ ಅನುಗ್ರಹ ದಿಂದ ಜನಿಸಿರುವದರಿಂದ ಇವನು ವಾತಕುಮಾರ. ಇವನ ಆರೋಗ್ಯ ಅನುಪಮವಾಗಿತ್ತು. ನಿರಂತರ ವ್ಯಾಯಾಮ, ದೇಹ ಪುಷ್ಟಿಗಳಿಂದ ಇವನು ವಜ್ರಾಂಗನಾಗಿದ್ದ.

ಹನುಮಂತ ಕಾಣುವುದಕ್ಕೆ ಕಪಿಯಾಗಿದ್ದ. ಆದರೆ ಅಂತ ರಂಗದಿಂದ ಕವಿಯಾಗಿದ್ದ. ಇದು ಅವನಿಗೆ ಅಪೂರ್ವ ಲಾಭವನ್ನು ಕೊಟ್ಟಿದೆ. ಕಪಿಯಂತೆ ಚಪಲತೆಯಿಂದ ರಾಮ ಕಾರ್ಯವನ್ನು ಸಾಧಿಸಿದ. ಕವಿಯಂತೆ ಧ್ಯಾನ, ಏಕಾಗೃತೆಗಳಿಂದ ರಾಮತತ್ವವನ್ನು ಗೃಹಿಸಿದ. ಋಷಿಗಳ ದರ್ಶನ ಮತ್ತು ಕಪಿಗಳ ಕ್ರಿಯಾಶಕ್ತಿ ಎರಡರ ಭಾವುಕವಾದ ಸಂಗಮವೇ ಹನುಮಂತ. ರಾಮ ಇದನ್ನು ಗುರುತಿಸಿದ.

ಶ್ರೀರಾಮ ಋಷಿಗಳ ನಡುವೆ ಬೆಳೆದ. ಇವನು ಋಷಿಗಳ ಮನಸ್ಸನ್ನು ಬಲ್ಲವ. ರಾಮನು ಒಳ್ಳೆಯ ಸಂಸ್ಕಾರಗಳನ್ನು ಕ್ರಿಯಾರೂಪಕ್ಕೆ ತರುವ ವಿಧಾನವನ್ನು ತಿಳಿದವ. ಹಾಗಾಗಿ ಹನುಮಂತನ ಒಳಗಿನ ಋಷಿ ದರ್ಶನವನ್ನು ಹೊರಗಿನ ದೈಹಿಕ ಕ್ರಿಯಾ ಕೌಶಲವನ್ನು ಒಂದಾಗಿ ಬೆಸೆದ. ಅದನ್ನು ಯುಗ ಧರ್ಮದ ಕಾರ್ಯಕ್ಕೆ ವಿನಿಯೋಗಿಸಿದ.

ಹನುಮಂತ ಸುಗ್ರೀವನ ಸೋದರ ಅಳಿಯ. ಸುಗ್ರೀವನ ಅಸಹಾಯಕ ಸ್ಥಿತಿಯಲ್ಲಿ ಅವನ ಮಂತ್ರಿಯಾಗಿ, ಅನುಚರನಾಗಿ, ಪ್ರೀತಿಯ ಅಳಿಯನಾಗಿ ಸೇವೆಯನ್ನು ಸಲ್ಲಿಸಿದವ.

ಬಂಧುತ್ವದ ನೆಲೆ ಬೆಲೆಗಳು ಹನುಮಂತನಿಗೆ ಚೆನ್ನಾಗಿ ತಿಳಿದಿದ್ದವು. ಸಂಬಂಧದಲ್ಲಿ ಸುಗ್ರೀವನಷ್ಟೇ ವಾಲಿಯೂ ಹತ್ತಿರದವನಾಗಿದ್ದ. ಆದರೆ ಸಂಸ್ಕಾರದಲ್ಲಿ ವಾಲಿಗಿಂತ ಸುಗ್ರೀವನೇ ಎತ್ತರ. ಆದುದರಿಂದ ಆಂಜನೇಯ ಅವನಿಗೆ ಹತ್ತಿರನಾದ. ನ್ಯಾಯಕ್ಕಾಗಿ, ನ್ಯಾಯದಿಂದ, ಬಂಧುಗಳನ್ನು ಎತ್ತರಿಸುವ, ಎತ್ತರದ ಬಂಧುಗಳನ್ನು ಹತ್ತಿರವಾಗಿಸುವ ಜನಾಂಗ ಸಂಸ್ಕಾರವು ಹನುಮಂತನ ವರ್ಚಸ್ಸಿಗೆ ಕಾರಣವಾಗಿತ್ತು. ಏಕಾಂತದ ಸಂದಿಗªಗಳಿಗೆ ಸುಗ್ರೀವನು ಹನುಮಂತನಲ್ಲಿಯೇ ಉತ್ತರಗಳನ್ನು ಪಡೆದುಕೊಳ್ಳುತ್ತಿದ್ದ.

ಪಂಪಾ ಸರೋವರದ ತೀರದಲ್ಲಿ ಇಬ್ಬರು ರಾಜವರ್ಚಸ್ಸಿನ ಯುವಕರು. ಜಟಾ ವಲ್ಕಲಗಳನ್ನು ಧಾರಣೆ ಮಾಡಿದವರು. ಇಬ್ಬರ ಕರಗಳಲ್ಲಿಯೂ ಉಜ್ವಲವಾದ ಧನಸ್ಸುಗಳಿದ್ದವು. ಬೆನ್ನಿಗೆ ಬಿಗಿದ ಭತ್ತಳಿಕೆಗಳು ದೂರದಲ್ಲಿಯೇ ಕಂಗೊಳಿಸುತ್ತಿದ್ದವು. ಋಷ್ಯಮೂಕದ ಶಿಖರದಲ್ಲಿರುವ ಸುಗ್ರೀವನಿಗೆ ಇದು ಕಂಡಿತು. ಹೆದರಿದ, ತನ್ನನ್ನು ಕೊಲ್ಲಲು ವಾಲಿಯೇ ವೀರರನ್ನು ಕಳುಹಿಸಿಕೊಟ್ಟ- ಎಂದು ತಿಳಿದ ಅವನು ಗಾಬರಿಗೊಂಡ. ವಿಷಯವನ್ನು ತಿಳಿದು ಸೂಕ್ತ ಪರಿಹಾರವನ್ನು ಒದಗಿಸಲು ಹನುಮಂತನನ್ನು ಕರೆದು ಅವರ ಬಳಿಗೆ ಕಳುಹಿಸಿದ. ಹನುಮಂತ ನೂರಕ್ಕೆ ನೂರು ದೂತ. ಪರೇಂಗಿತ ವಿಜ್ಞಾನ ಅವನ ಸಂಪದ. ಬಂದ ಯುವಕರ ಒಳವನ್ನೂ, ಒಲವನ್ನೂ ತಿಳಿಯಲು ಒಟುವಿನ ವೇಷವನ್ನು ಧರಿಸಿದ. ಮಾತಿಗೆ ತೊಡಗಿದ.

ಬಂದವರು ರಾಮ ಲಕ್ಷ್ಮಣರು ಎನ್ನುವದು ತಿಳಿಯಿತು. ಅವರಿಬ್ಬರಿಗೂ ಇವನ ಮಾತುಗಳು ಆಪ್ಯಾಯನ ಎನಿಸಿದವು. ಶ್ರೀರಾಮ ಉದ್ಗರಿಸಿದ- ಋಗ್ವೇದದಿಂದ ವಿನಯ ಪಡೆಯದ, ಯಜುರ್ವೇದವನ್ನು ಧಾರಣೆ ಮಾಡದ, ಸಾಮವವೇದನ್ನು ಚೆನ್ನಾಗಿ ತಿಳಿಯದ ವ್ಯಕ್ತಿ ಹೀಗೆ ಮಾತನಾಡಲಾರ. ಬಹಳ ಮಾತಾಡಿದ. ಆದರೆ ಒಂದೇ ಒಂದು ಅಪಶಬ್ದವನ್ನೂ ಪ್ರಯೋಗಿಸಲಿಲ್ಲ. ಇವನ ಮಾತು ಕತ್ತಿಹಿರಿದು ನಿಂತ ವೈರಿಯ ಆಗ್ರಹವನ್ನೂ, ಕರಗಿಸುವಷ್ಟು ಮನೋಜ್ಞವಾಗಿದೆ.

ಈ ಅಭಿನಂದನೆಯೇ ಅವನ ಪರಿಚಯಯಕ್ಕೆ ನಾಂದಿ ಆಯಿತು. ರಾಮ ಹನುಮಂತನನ್ನು ಪರಿಕಿಸಿದ, ಪರೀಕ್ಷಿಸಿದ. ಹನುಮಂತನ ಪ್ರಾಮಾಣಿಕತೆ ಋಜುವಾತುಗೊಂಡಿತು. ಅಂತರಂಗದಿಂದ ರಾಮ ಅವನನ್ನು ಒಪ್ಪಿ ತನ್ನ ದೂತನಾಗಿ ಅಂಗೀಕರಿಸಿದ.

ಈ ಪ್ರಸಂಗ ರಾಮ ಹನುಮಂತರನ್ನು ಹತ್ತಿರಕ್ಕೆ ತಂದಿತು. ಅವರಿಬ್ಬರ ಹೃದಯಗಳನ್ನು ಬೆಸೆಯಿತು. ರಾಮ ನಾಥನಾದ, ಹನುಮಂತ ದೂತನಾದ. ರಾಮಸ್ವಾಮಿಯಾದ, ಮಾರುತಿ ಭೃತ್ಯನಾದ. ಶ್ರೀರಾಮನಲ್ಲಿ ವಾತ್ಸಲ್ಯ ಮೂಡಿತು. ಆಂಜನೇಯನಲ್ಲಿ ಭಕ್ತಿ ಬಲಿಯಿತು.

ಹನುಮಂತನ ಒಂದು ಪಾದ ಭಕ್ತಿಯದು. ಇನ್ನೊಂದು ಪಾದ ಶ್ರದ್ಧೆಯದು. ಅವನ ಒಂದು ತೋಳು ಆತ್ಮಪ್ರತ್ಯಯದ್ದು. ಇನ್ನೊಂದು ಭುಜ ಪೌರುಷದ್ದು. ರಾಮಕಾರ್ಯ ಸಾಧನೆಗೆ ಈ ನಾಲ್ಕೂ ಅನಿವಾರ್ಯ, ಅತ್ಯಂತ ಅಗತ್ಯ. ಭಕ್ತಿ ಶ್ರದ್ಧೆಗಳು ಇಲ್ಲದವರಿಗೆ ಯಾವ ಕಾರ್ಯವನ್ನೂ ಸಾಧಿಸುವ ಮೂಲಾರ್ಹತೆಯೇ ಇರುವದಿಲ್ಲ. ಆತ್ಮ ವಿಶ್ವಾಸ ಮತ್ತು ಪೌರುಷಗಳು ಇಲ್ಲದ ವರು ಗುರಿ ಗೊತ್ತಾದರೂ, ದಾರಿ ಕಂಡರೂ ಕಾರ್ಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಲಾರರು. ಹನುಮಂತ ನಲ್ಲಿ ಕಾರ್ಯಸಾಧನೆಯ ಎಲ್ಲ ಯೋಗ್ಯ ತೆಗಳು ಹುಲುಸಾಗಿ ಸೇರಿದ್ದವು.

ವಾಲಿಯ ಹನನವಾಗಿ ಸುಗ್ರೀವನಿಗೆ ಕಿಷ್ಕಿಂದೆಯ ಅಧಿಕಾರ ಬಂತು. ಸುಗ್ರೀವ ಸೀತೆಯನ್ನು ಶೋಧಿಸಲು ಕಾರ್ಯ ಪ್ರವೃತ್ತನಾದ. ವಾನರರ ನಾಲ್ಕು ತಂಡ ಗಳನ್ನು ಯೋಜಿಸಿ ಬೇರೆ ಬೇರೆ ದಿಕ್ಕುಗಳಿಗೆ ಕಳುಹಿಸಿಕೊಟ್ಟ. ದಕ್ಷಿಣದ ಲಂಕೆಯ ಕಡೆಗೂ ಒಂದು ವಾನರರ ಗುಂಪು ಸೀತಾನ್ವೇಷಣೆಗೆ ಹೊರಟಿತ್ತು. ಆ ಗುಂಪಿಗೆ ಹನುಮಂತ ಜಾಂಬವಂತರೇ ನೇತಾರರಾಗಿದ್ದರು. ಹನುಮಂತನ್ನು ರಾಮಚಂದ್ರನು ಏಕಾಂತದಲ್ಲಿ ಕರೆದು ತನ್ನ ಮುದ್ರೆಯುಂಗುರವನ್ನು ಅವನ ಕೈಗೆ ಒಪ್ಪಿಸಿದ. ಸೀತೆಯನ್ನು ಹುಡುಕಲು ಹನುಮಂತನೇ ಸಮರ್ಥ ಎಂದು ರಾಮನ ಮನಸ್ಸಿಗೆ ಅನಿಸಿತ್ತು. ತಾನು ಕೊಡುವ ಅಭಿಜ್ಞಾನವನ್ನು ಹನುಮಂತ ಮಾತ್ರ ಸೀತೆಗೆ ಒಪ್ಪಿಸಬಲ್ಲ ಎಂಬುದು ತಿಳಿದಿತ್ತು. ಎಂಥ ಕಷ್ಟ ಬಂದರೂ ಹಿಡಿದ ಕಾರ್ಯ ಸಾಧಿಸುವ ಕಾರ್ಯದಕ್ಷತೆ ಅವನಲ್ಲಿ ಮಾತ್ರ ಇದೆ ಎಂದು ಶ್ರೀರಾಮ ಗುರುತಿಸಿದ್ದ.

ಒಬ್ಬ ಸ್ವಾಮಿಯ ಪೂರ್ಣ ವಿಶ್ವಾಸವನ್ನು ಗೆಲ್ಲುವುದು ಸಾಮಾನ್ಯ ಸಂಗತಿ ಏನಲ್ಲ. ಸೇವಕನಾದವನು ಸ್ವಾಮಿಯನ್ನು ನಂಬಬಹುದು. ಅವನನ್ನು ಪ್ರೀತಿಸಲೂ ಬಹುದು. ಆದರೆ ಅಷ್ಟೇ ಮೊತ್ತದ ಪ್ರೀತಿ ವಿಶ್ವಾಸಗಳಿಂದ ನಾಯಕನು ತನ್ನ ಸೇವಕರನ್ನು ನೆಚ್ಚಿಕೊಳ್ಳುತ್ತಾನೆ ಎಂಬ ವಿಷಯದಲ್ಲಿ ನಿಯಮವಿಲ್ಲ. ಆದರೆ ರಾಮ ಹನುಮಂತರ ಸಂಬಂಧದಲ್ಲಿ ಪರಸ್ಪರ ಪ್ರೀತಿ ವಿಶ್ವಾಸಗಳು ಮೇಳೈಸಿಕೊಂಡಿರುದು ಕಾವ್ಯದ ವಸ್ತುವಾದರೂ ಅದು ವಿಶ್ವದ ಭಾವ ಸಂಪತ್ತು.

ಸಂಪಾತಿಯ ಸೂಚನೆಯಂತೆ ದಕ್ಷಿಣ ಭೂಶಿರದ ಅಂಚಿನಲ್ಲಿ ವಾನರರ ಗುಂಪು ನಿಂತಿದೆ. ಎದುರುಗಡೆ ಶತಯೋಜನದ ವಿಸ್ತೀರ್ಣ ವಾದ ಸಮುದ್ರ ಭೋರ್ಗರೆಯುತ್ತಿದೆ. ನೋಡಿದಲ್ಲೆಲ್ಲ ಜಲರಾಶಿ. ನಿಂತ ನೆಲ ಎತ್ತರದ ಪರ್ವತ ಪ್ರಾಂತ. ಮೇಲೆ ಮುಗಿಯದ ಆಗಸ. ಮುಂದೆ ತುದಿಗಾಣದ ಸಮುದ್ರ. ಸಾಗಲು ದಾರಿಯಿಲ್ಲ. ಸಮುದ್ರವನ್ನು ದಾಟುವದು ಹೇಗೆ? ವಾನನರಿಗೆ ಈಜು ಗೊತ್ತಿಲ್ಲ. ಹಾರುವದಕ್ಕೆ ಮರಗಳಿಲ್ಲ. ಕಾರ್ಯ ಸಾಧನೆ ಆಗದೇ ಮನೆಗೆ ಮರಳುವಂತಿಲ್ಲ.

ಸಾಯುವುದು….! ಬದುಕಿ ದರೆ ರಾಮಕಾರ್ಯವನ್ನು ಸಾಧಿಸುವದು…. !! ಇಕ್ಕಟ್ಟಿನ ಈ ಬಿಕ್ಕಟ್ಟಿಗೆ ಹನುಮಂತನೇ ಉತ್ತರ. ಜೀವನ ಮರಣಗಳ ಹಂಗಿಲ್ಲದೇ ಸ್ವಾಮಿ ಕಾರ್ಯಕ್ಕೆ ಮೈ ಕೊಟ್ಟವನು ಅವನು. ತನ್ನೊಳಗಿನ ಯೋಗ ಶಕ್ತಿಯನ್ನು ಬಳಸಿಕೊಂಡ. ಎತ್ತರವಾದ ಮಹಿಂದ್ರಾಚಲ ವನ್ನು ಏರಿದ. ರಾಮನ ನಾಮ ಪಠಿಸುತ್ತ ಗಗನಕ್ಕೆ ಜಿಗಿದ. ಅಪಾರವಾದ ಸಾಗರ ದಾಟಿದ. ಅಶೋಕವನದಲ್ಲಿ ಸೀತೆಯನ್ನು ಕಂಡ. ಅವಳಿಗೆ ಮುದ್ರೆ ಯುಂಗುರವನ್ನು ಕೊಟ್ಟ. ಅವಳಲ್ಲಿ ಬದುಕುವ ಆಶಾಲತೆಯನ್ನು ಚಿಗುರಿಸಿದ. ಅವಳ ತಲೆಯ ಮೇಲಿರುವ ಚೂಡಾರತ್ನವನ್ನು ಪಡೆದ. ಅದನ್ನು ರಾಮನ ಕೈಯ್ಯಲ್ಲಿಟ್ಟ. ಅಭಿಜ್ಞಾನದ ಮೂಲಕ ಪ್ರಕೃತಿ ಪುರುಷರನ್ನು ಭಾವನೆಯಿಂದ ಒಂದುಗೂಡಿಸಿದ. ಈ ಜಗದ ಸುಂದರವಾದ ವಸ್ತು ಪ್ರಕೃತಿ ಪುರುಷ ಸಮಾಗಮ. ಅದನ್ನು ಸಾಧಿಸಿದ ಪರಮ ಸುಂದರ ಹನುಮಂತ. ರಾಮನೇ ಸುಂದರ. ಸೀತೆಯಂತೂ ಮತ್ತೂ ಸುಂದರ. ಇವರ ಸಮಾಗಮ ಮತ್ತಷ್ಟು ಸುಂದರ. ಅದನ್ನು ಸಾಧಿಸಿದ ಹನುಮಂತ ಕಪಿಯಾಗಿಯೂ ಪರಮ ಸುಂದರ. ಇದಕ್ಕೆ ಹನುಮಂತನಿಗೆ ಸಿಕ್ಕ ಪ್ರತಿಫ‌ಲ ಸೀತೆಗೆ ಮಾತ್ರ ದಕ್ಕಿದ ಶ್ರೀರಾಮಚಂದ್ರಮನ ಪ್ರೀತಿಯ ಆಲಿಂಗನ. ಮರ್ಯಾದ ಪುರುಷ ಶ್ರೀರಾಮಚಂದ್ರಮನ ನಿಡಿದೋಳುಗಳಲ್ಲಿ ಅಡಗಿದ ಹನುಮಂತ ಭವವನ್ನು ಮರೆತ, ಭವೋದ್ಭವನಾಗಿ ಉದಿಸಿದ.

ಮಾನವ ಸಮಾಜ ಹಲವು ಸಂಬಂಧಗಳ ಹಂದರ. ಆಯಾ ಸಂಬಂಧಗಳು ತಮ್ಮ ತಮ್ಮ ಮಿತಿಯೊಳಗೆ ಬೆಳೆದು ಬೆಳಗಿದರೆ ಸಂಸ್ಕೃತಿ ಚಿರಂತನವಾಗುತ್ತದೆ. ಬದುಕು ಹಸನಾಗುತ್ತದೆ. ಎಲ್ಲರಿಗೂ ಇಷ್ಟವಾಗುತ್ತದೆ. ಆ ಸಂಬಂಧಗಳಲ್ಲಿ ಕೌಟುಂಬಿಕ ಸಂಬಂಧಗಳು ಚೆನ್ನಾಗಿ ರೂಪುಗೊಂಡಿವೆ. ಆದರೆ ಈ ಎಲ್ಲ ಸಂಬಂಧಗಳಿಗೆ ರಕ್ಷಣೆ ಒದಗಿಸುವದು ಸ್ವಾಮಿ ಸೇವಕ ಸಂಬಂಧ. ಆಳುವವರಿಗೂ, ಆಳಿಸಿಕೊಳ್ಳುವವರಿಗೂ ಇರುವ, ಇರಬೇಕಾದ ವಿಶ್ವಾಸಪೂರ್ವಕವಾದ ಸೌಮನಸ್ಯದ ಸಂಬಂಧ. ರಾಜಪ್ರಭುತ್ವ ವಾಗಲಿ, ಪ್ರಜಾಪ್ರಭುತ್ವ ವಾಗಲಿ ಈ ಸಂಬಂಧವೇ ಬಲಿಷ್ಠವಾಗಿ ರೂಪುಗೊಳ್ಳಬೇಕು. ಅದನ್ನು ಚಿತ್ರಿಸುವ, ರೂಪಿಸುವ ಸಲು ವಾಗಿಯೇ ಎಲ್ಲ ದೇಶಗಳ ರಾಜ್ಯ ಶಾಸ್ತ್ರ, ಅರ್ಥಶಾಸ್ತ್ರದ ಸಿದ್ದಾಂತಗಳು ತೊಡಗಿವೆ. ಆದರೆ ಭಾರತ ದೇಶದ ರಾಮಾಯಣ ಅದಕ್ಕೆ ಬೇಕಾದ ಮೂಲ ಸಾಮಗ್ರಿಯನ್ನು ತನ್ನ ಎಲ್ಲ ಪರಿಷ್ಕಾರಗ ಳೊಂದಿಗೆ ಒದಗಿಸುತ್ತಿದೆ.

ರಾಮಾಯಣ ಕಡೆದು ನಿಲ್ಲಿಸುವ ಸ್ವಾಮಿ ಭೃತ್ಯ ಸಂಬಂಧ ಅಮೋಘವಾದದ್ದು. ಒಂದುಕಡೆ ತನ್ನ ಸೇವಕರನ್ನು ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುವ, ನಂಬುವ ನಾಯಕ ರಾಮಚಂದ್ರ. ಇನ್ನೊಂದು ಕಡೆ ತಂದೆ ತಾಯಿಗಳಿಗಿಂತಲೂ ಮಿಗಿಲಾಗಿ ಆದರಿಸುವ ಗೌರವಿ ಸುವ ವಿನಯದಿಂದ ಸೇವಿಸುವ ಸೇವಕ ಹನುಮಂತ. ಅವರಿಬ್ಬರ ಒಡನಾಟ, ಪರಸ್ಪರ ಪೂರಕತ್ವಗಳು ವಿಶ್ವಕ್ಕೆ ಒಂದು ಆದರ್ಶ.

ಆಧುನಿಕ ಸಮಾಜದಲ್ಲಿ ನಾಯಕ- ನೇಯ ಸಂಬಂಧದ ಹಲವು ಸಂಸ್ಥೆಗಳನ್ನು ನಾವು ಕಾಣುತ್ತೇವೆ. ಊರಿನ ಗ್ರಾಮ ಪಂಚಾಯತ್‌ ಕಚೇರಿಯಿಂದ ದಿಲ್ಲಿಯ ಸಂಸತ್ತಿನ ತನಕ, ಶಾಲೆ ಕಾಲೇಜುಗಳಿಂದ ಪ್ರಾರಂಭಿಸಿ ಮಹಾ ನಗರಗಳಲ್ಲಿನ ಕಚೇರಿಗಳವರೆಗೆ ಲಕ್ಷಾಂತರ ಸಂಖ್ಯೆಯ ಜನರು ಈ ಸ್ವಾಮಿ ಭೃತ್ಯ ಸಂಬಂಧದ ಹಲವು ಪರಿಗಳನ್ನು ಅವಲಂಬಿಸಿಯೇ ಕಾರ್ಯೋನ್ಮುಖರಾಗಿ ತೊಡಗಿಕೊಂಡಿದ್ದಾರೆ. ಆದರೆ ಅವರಲ್ಲಿ ರಾಮನಂಥ ನಾಯಕರು ಎಷ್ಟು ಜನ? ಹನುಮಂತನಂತ ಸೇವಕರು ಎಷ್ಟು ಮಂದಿ?
ಈಗ ನಮ್ಮ ದೇಶಕ್ಕೆ ಒಬ್ಬ ರಾಮ ಸಾಲದು….. ಒಬ್ಬ ಹನುಮಂತನೂ ಸಾಲದು…. ಊರು ಊರುಗಳಲ್ಲಿ ಮನೆ ಮನೆಗಳಲ್ಲಿ ರಾಮನಂಥ ನಾಯಕರೂ, ಹನುಮಂತನಂಥ ಸೇವಕರೂ ಬೆಳೆದು ಬರಬೇಕು. ಆಗ ನಮ್ಮ ದೇಶ ಅಕ್ಷರಶಃ ರಾಮ ರಾಜ್ಯವಾಗುತ್ತದೆ.

– ವಿ.ಉಮಾಕಾಂತ ಭಟ್ಟ ಕೆರೇಕೈ, ಹಿರಿಯ ವಿದ್ವಾಂಸರು, ತಾಳಮದ್ದಲೆಯ ಪ್ರಸಿದ್ಧ ಅರ್ಥದಾರಿಗಳು

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.