ಕುದುರೆ ಸವಾರಿ: ಫೌವಾದ್ಗೆ 22ನೇ ಸ್ಥಾನ
Team Udayavani, Aug 2, 2021, 3:00 AM IST
ಟೋಕಿಯೊ: ಕುದುರೆ ಸವಾರಿ ಸ್ಪರ್ಧೆಯಲ್ಲಿ ಭಾಗವಹಿಸಿರುವ ಕರ್ನಾಟಕದ ಫೌವಾದ್ ಮಿರ್ಜಾ, ಗುಡ್ಡಗಾಡು ಕುದುರೆ ಸವಾರಿ ಮುಗಿದಾಗ 22ನೇ ಸ್ಥಾನ ಗಳಿಸಿದ್ದಾರೆ. ಸೋಮವಾರ ಅವರು ನೆಗೆತದ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದರೆ, ಅಂತಿಮ ಸುತ್ತಿಗೆ ಪ್ರವೇಶ ಪಡೆಯಲಿದ್ದಾರೆ. ಅಲ್ಲಿಗೆ ಕಳೆದ 20 ವರ್ಷಗಳಲ್ಲಿ ಈ ಸಾಧನೆ ಮಾಡಿದ ಭಾರತದ ಏಕೈಕ ಕುದುರೆ ಸವಾರನಾಗಲಿದ್ದಾರೆ.
ರವಿವಾರ “ಸೀಗ್ನರ್ ಮೆಡಿಕಾಟ್’ ಕುದುರೆಯೇರಿದ ಮಿರ್ಜಾ ಎಲ್ಲರ ನಿರೀಕ್ಷೆ ಮೀರಿ ಉತ್ತಮ ಪ್ರದರ್ಶನ ನೀಡಿದರು. ಸಮುದ್ರ-ಅರಣ್ಯ ಗುಡ್ಡಗಾಡು ಸ್ಪರ್ಧೆಯಲ್ಲಿ ಅವರು ಒಟ್ಟಾರೆ 39.20 ಅಂಕ ಗಳಿಸಿದರು. 8 ನಿಮಿಷದಲ್ಲಿ ಸ್ಪರ್ಧೆ ಮುಗಿಸಿದರು. ನಿಯಮದಂತೆ, 7.45 ನಿಮಿಷಗಳಲ್ಲಿ ಈ ಸಾಧನೆ ಮಾಡಬೇಕಿತ್ತು. ಹೀಗಾಗಿ ದಂಡದ ರೂಪದಲ್ಲಿ 11.20 ಅಂಕ ಕಳೆದುಕೊಂಡರು. ಈ ಸಮಯದಲ್ಲಿ ಮಿರ್ಜಾಗೆ ಸ್ವಲ್ಪ ತಾಂತ್ರಿಕ ತೊಂದರೆಯೂ ಎದುರಾಯಿತು. ಆದ್ದರಿಂದ ಸವಾರಿ ಆರಂಭದಲ್ಲಿ ತುಸು ವಿಳಂಬವಾಯಿತು.