ದಾಳಿ ವೇಳೆ ಅಪಾರ ಡ್ರಗ್ಸ್ ವಶ
Team Udayavani, Oct 7, 2021, 5:39 AM IST
ಮುಂಬಯಿ: ಡ್ರಗ್ಸ್ ಪ್ರಕರಣ ಸಂಬಂಧ ಕ್ರೂಸ್ ನೌಕೆಯಲ್ಲಿ ಬಂಧಿತರಾದ ಆರ್ಯನ್ ಖಾನ್ ಸೇರಿದಂತೆ 8 ಮಂದಿ ಆರೋಪಿಗಳಿಂದ ಭಾರೀ ಪ್ರಮಾಣದ ಮಾದಕ ದ್ರವ್ಯಗಳು ಹಾಗೂ 1.33 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಸಿಬಿ ಬುಧವಾರ ತಿಳಿಸಿದೆ.
ದಾಳಿ ವೇಳೆ ಯಾವುದೇ ಡ್ರಗ್ಸ್ ಸಿಕ್ಕಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ಎನ್ಸಿಬಿ, “ಕೊಕೇನ್, ಮೆಫೆಡ್ರೋನ್, ಚರಸ್, ಗಾಂಜಾ, ಎಂಡಿಎಂಎ ಸೇರಿ ಅಪಾರ ಪ್ರಮಾಣದ ಡ್ರಗ್ ಸ್ಥಳದಲ್ಲೇ ಸಿಕ್ಕಿವೆ. ಪ್ರಕರಣ ಸಂಬಂಧ ಈವರೆಗೆ 17 ಮಂದಿಯನ್ನು ಬಂಧಿಸಲಾಗಿದೆ’ ಎಂದು ಹೇಳಿದೆ.
ನಕಲಿ ದಾಳಿ: ಇದಕ್ಕೂ ಮುನ್ನ ಎನ್ಸಿಬಿ ದಾಳಿಯನ್ನು “ನಕಲಿ’ ಎಂದು ಕರೆದಿದ್ದ ಎನ್ಸಿಪಿ ನಾಯಕ ನವಾಬ್ ಮಲಿಕ್, “ನೌಕೆಯಲ್ಲಿ ಯಾವುದೇ ಡ್ರಗ್ಸ್ ಸಿಕ್ಕಿರಲಿಲ್ಲ. ಆರ್ಯನ್ ಖಾನ್ ಅವರ ಕೈಹಿಡಿದುಕೊಂಡು ಬಂದಿದ್ದ ಇಬ್ಬರು ವ್ಯಕ್ತಿಗಳು ಎನ್ಸಿಬಿ ಅಧಿಕಾರಿಗಳೇ ಅಲ್ಲ. ಅದರಲ್ಲಿ ಒಬ್ಬ ಖಾಸಗಿ ಪತ್ತೇದಾರಿ, ಮತ್ತೂಬ್ಬ ಬಿಜೆಪಿ ಕಾರ್ಯಕರ್ತ’ ಎಂದು ಆರೋಪಿಸಿದ್ದರು. ಜತೆಗೆ ಅವರಿಬ್ಬರ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ಗಳನ್ನೂ ಸಾಕ್ಷ್ಯವಾಗಿ ತೋರಿಸಿದ್ದರು.