ಕೊರೊನಾ ಕಾರಣಕ್ಕೆ ವೀಸಾ ನಿರಾಕರಣೆ ಸಲ್ಲ
Team Udayavani, Oct 8, 2021, 7:50 AM IST
ವಾಷಿಂಗ್ಟನ್: ಕೊರೊನಾ ಹರಡುತ್ತದೆ ಎಂಬ ಕಾರಣಕ್ಕಾಗಿ ಅರ್ಹ ಪ್ರಯಾಣಿಕರಿಗೆ ವೀಸಾ ನೀಡದೆ ನಿಷೇಧ ಹೇರುವಂತೆ ಇಲ್ಲ. ಈ ಬಗ್ಗೆ ಅಮೆರಿಕದ ವಿದೇಶಾಂಗ ಸಚಿವಾಲಯದ ನಿರ್ಣಯ ಸರಿಯಾ ದುದಲ್ಲ ಎಂದು ಕೊಲಂಬಿಯಾದ ಕೋರ್ಟ್ ಆದೇಶ ನೀಡಿದೆ.
ವಿದೇಶಾಂಗ ಸಚಿವಾಲಯದ ನಿರ್ದೇಶನ ಪ್ರಶ್ನೆ ಮಾಡಿ, ಅಮೆರಿಕನ್ ಎಮಿಗ್ರೇಷನ್ ಲಾಯರ್ಸ್ ಎಸೋಸಿಯೇಶನ್ (ಅಲಿಯಾ) ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಪ್ರಯಾಣಕ್ಕೆ ನಿಷೇಧ ಎಂದರೆ ವೀಸಾ ನಿಷೇಧಕ್ಕೆ ಸಮ ಎಂದು ಅಲಿಯಾ ವಾದಿಸಿತ್ತು. ಈ ಅಂಶವನ್ನು ಆಮೂಲಾಗ್ರ ವಾಗಿ ಪರಿಶೀಲಿಸಿದ ನ್ಯಾಯಾಧೀಶ ಜೇಮ್ಸ್ ಇ. ಬೋಸ್ಬರ್ಗ್ ಸರಕಾರವು, ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ವೀಸಾ ನೀಡದೆ ಇರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಆದೇಶದಿಂದಾಗಿ ಭಾರತದ ಟೆಕಿಗಳಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಜತೆಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್) ಕ್ಷೇತ್ರಗಳ ಪರಿಣತರಿಗೆ ಅಮೆರಿಕ ಪ್ರವಾಸಕ್ಕೆ ನೆರವಾಗಲಿದೆ.