ಮಾರ್ಚ್ ನಲ್ಲಿ 12-14ರ ವಯಸ್ಸಿನ ಮಕ್ಕಳಿಗೆ ಲಸಿಕೆ?
Team Udayavani, Jan 18, 2022, 7:30 AM IST
ಹೊಸದಿಲ್ಲಿ: ಲಸಿಕೆ ಅಭಿಯಾನವನ್ನು ಇನ್ನಷ್ಟು ವಿಸ್ತರಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು, 12-14 ವರ್ಷದೊಳಗಿನ ಮಕ್ಕಳಿಗೆ ಮಾರ್ಚ್ ಮೊದಲ ವಾರದಿಂದ ಲಸಿಕೆ ಹಾಕುವ ಸಾಧ್ಯತೆ ಇದೆ ಎಂದು ಸರಕಾರದ ಮೂಲಗಳು ಹೇಳಿವೆ.
ಫೆಬ್ರವರಿ ಅಂತ್ಯದ ಹೊತ್ತಿಗೆ 15-17 ವರ್ಷದ ವಯೋಮಾನದವರ ಲಸಿಕೆ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ. ಈ ಬಳಿಕ 12-14 ವರ್ಷದ ಮಕ್ಕಳಿಗೆ ಲಸಿಕೆ ಪ್ರಕ್ರಿಯೆ ಆರಂಭವಾಗಬಹುದು ಎಂದು ಕೋವಿಡ್ ಕಾರ್ಯಕಾರಿ ಗುಂಪಿನ ಮುಖ್ಯಸ್ಥ ಡಾ| ಎನ್.ಕೆ. ಅರೋರಾ ಹೇಳಿದ್ದಾರೆ. ಈ ವಯೋಮಾನದ 7.5 ಕೋಟಿ ಮಕ್ಕಳು ಇದ್ದಾರೆ ಎಂದು ಅಂದಾಜಿಸಲಾಗಿದೆ.
ಕಡ್ಡಾಯ ಮಾಡಿಲ್ಲ
ಇದೇವೇಳೆ, ಲಸಿಕೆಯನ್ನು ಪಡೆಯಲೇಬೇಕು ಎಂದು ಕಡ್ಡಾಯ ಮಾಡಿಲ್ಲ, ಲಸಿಕೆ ಪ್ರಮಾಣಪತ್ರವನ್ನು ಎಲ್ಲ ಕಡೆ ಹಿಡಿದುಕೊಂಡು ಓಡಾಡಿ ಎಂದೂ ಯಾರಿಗೂ ಹೇಳಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಅಫಿದಾವಿತ್ ಸಲ್ಲಿಸಿದೆ.
ದಿವ್ಯಾಂಗರಿಗೆ ಸುಲಭವಾಗಿ ಲಸಿಕೆ ಸಿಗುವ ಬಗ್ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರಕಾರ ಸುಪ್ರೀಂಕೋರ್ಟ್ಗೆ ಈ ಅರಿಕೆ ಮಾಡಿದೆ. ನಾವು ಹೊರಡಿಸಿರುವ ಮಾರ್ಗಸೂಚಿಗಳು ಕೂಡ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿಲ್ಲ ಎಂದು ತಿಳಿಸಿದೆ.