ಪ್ರವೀಣ್ ಹತ್ಯೆ ಪ್ರಕರಣ ಎನ್ಐಎಗೆ ವಹಿಸಿದ ಸಿಎಂ ಬೊಮ್ಮಾಯಿ
ಕೇರಳ ಗಡಿಯಲ್ಲಿ ಸಿಸಿಟಿವಿ ಅಳವಡಿಸಿ,ಚೆಕ್ ಪೋಸ್ಟ್ ಹಾಕಿ ಕಣ್ಗಾವಲು
Team Udayavani, Jul 29, 2022, 2:30 PM IST
ಬೆಂಗಳೂರು : ಸುಳ್ಯದ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶುಕ್ರವಾರ ತೀರ್ಮಾನ ಕೈಗೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಡಿಜಿ ಐಜಿಪಿ ಪ್ರವೀಣ್ ಸೂದ್ ಜೊತೆ ಚರ್ಚೆ ಮಾಡಿದ್ದೇನೆ. ಪ್ರವೀಣ್ ಹತ್ಯೆ ಆರ್ಗನೈಸಡ್ ಕ್ರೈಂ. ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಪ್ರಕರಣದ ತನಿಖೆ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಪ್ರಕರಣ ಎರಡು ರಾಜ್ಯಕ್ಕೆ ಸಂಬಂಧಿಸಿದ್ದಾಗಿದ್ದು, ಪ್ರಕರಣವನ್ನು ಎನ್ಐಎ ಗೆ ವಹಿಸಲು ತೀರ್ಮಾನಿಸಿದ್ದೇವೆ, ಅದಕ್ಕೆ ಸಂಬಂಧಿಸಿದಂತೆ ಎನ್ ಐಎಗೆ ಪತ್ರ ಬರೆಯುವುದಕ್ಕೆ ಹೇಳಿದ್ದೇನೆ ಎಂದರು.
ಕೇರಳ ಗಡಿಯಲ್ಲಿ ಸಿಸಿಟಿವಿ ಅಳವಡಿಸಿ,ಚೆಕ್ ಪೋಸ್ಟ್ ಹಾಕಿ ಕಣ್ಗಾವಲು ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೋಲಿಸ್ ಕ್ಯಾಂಪ್ ಮಾಡಲು ತಿಳಿಸಲಾಗಿದೆ. ಕೆ ಎಸ್ ಆರ್ ಪಿ ಬೆಟಾಲಿಯನ್ ದಕ್ಷಿಣ ಕನ್ನಡದಲ್ಲಿ ನೇಮಕ ಮಾಡಲು ಸೂಚನೆ ನೀಡಲಾಗಿದೆ. ರಾತ್ರಿ ಹೊತ್ತು ಹೆಚ್ಚು ಗಸ್ತು ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.