ಆಸೀಸ್ ಕೀಪರ್ ಮ್ಯಾಥ್ಯೂ ವೇಡ್ಗೆ ಕೊರೊನಾ!
Team Udayavani, Oct 28, 2022, 6:15 AM IST
ಮೆಲ್ಬರ್ನ್: ಶುಕ್ರವಾರ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ವಿರುದ್ಧ ಅತ್ಯಂತ ಮಹತ್ವದ ಪಂದ್ಯವನ್ನಾಡಲಿದೆ. ಈ ಹೊತ್ತಿನಲ್ಲೇ ಅದಕ್ಕೆ ಆಘಾತಕಾರಿ ಸುದ್ದಿ ಎದುರಾಗಿದೆ. ಆಸೀಸ್ ತಂಡದ ಪ್ರಮುಖ ಬ್ಯಾಟರ್, ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ಗೆ ಕೊರೊನಾ ತಗುಲಿದೆ. ಆದರೂ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಐಸಿಸಿ ನಿಯಮಗಳ ಪ್ರಕಾರ ಕೊರೊನಾ ಇದ್ದರೂ ಆಟಗಾರನೊಬ್ಬ ಪಂದ್ಯದಲ್ಲಿ ಆಡಬಹುದಾಗಿದೆ.
ಈ ವಿಶ್ವಕಪ್ನಲ್ಲಿ ಈಗಾಗಲೇ ಕೆಲವು ತಂಡಗಳ ಆಟಗಾರರು ಕೊರೊನಾಪೀಡಿತರಾಗಿದ್ದರೂ ಆಡಿದ್ದಾರೆ. ಸದ್ಯ ವೇಡ್ಗೆ ಸಣ್ಣ ಪ್ರಮಾಣದಲ್ಲಿ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ. ಹಾಗಾಗಿ ಆಡಲೇನಡ್ಡಿಯಿಲ್ಲ.
ಒಂದು ವೇಳೆ ವೇಡ್ ಗೈರಾದರೆ ಗ್ಲೆನ್ ಮ್ಯಾಕ್ಸ್ವೆಲ್ ಕೀಪಿಂಗ್ ಮಾಡಬಹುದು. ಗುರುವಾರ ಮ್ಯಾಕ್ಸ್ವೆಲ್ ಕೀಪಿಂಗ್ ಅಭ್ಯಾಸ ನಡೆಸಿದ್ದು ಗಮನ ಸೆಳೆಯಿತು.