ಕಂಠಪೂರ್ತಿ ಕುಡಿದು ನಿದ್ದೆ ಹೊಡೆದ 24 ಆನೆಗಳು!
Team Udayavani, Nov 10, 2022, 7:45 PM IST
ಭುವನೇಶ್ವರ: ಗುಂಡು ಪ್ರಿಯರು ಭರಪೂರ ಪಾನೀಯ ಸೇವನೆ ಮಾಡುವುದು ಹೊಸ ವಿಚಾರವಲ್ಲ. ಆದರೆ, ಕೆಲವೊಮ್ಮೆ ಪ್ರಾಣಿಗಳಿಗೂ ಗುಂಡಿನ ರುಚಿ ಹತ್ತುವುದುಂಟು. ಇಂಥದ್ದೊಂದು ಘಟನೆ ಒಡಿಶಾ ಅರಣ್ಯದಲ್ಲಿ ನಡೆದಿದೆ.
ಬರೋಬ್ಬರಿ 24 ಆನೆಗಳು ಕ್ಯೋಂಜಾರ್ ಜಿಲ್ಲೆಯ ಶಿಲಿಪಾದ ಗ್ರಾಮದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸ್ಥಳೀಯವಾಗಿ ತಯಾರಿಸಲಾಗುವ “ಮಹುವಾ’ ಎಂಬ ಮದ್ಯವನ್ನು ಸೇವಿಸಿವೆ. ಅದನ್ನು ಸೇವಿಸಿದ್ದೇ ತಡ, ಆನೆಗಳನ್ನು ನಿದ್ರಾದೇವಿ ಆವರಿಸಿಬಿಟ್ಟಿದ್ದಾಳೆ. ಅದರ ತಯಾರಿ ಪೂರ್ತಿಯಾಗಿರಲಿಲ್ಲ. ಆದರೂ, ಆನೆಗಳು ಅದನ್ನು ಸೇವಿಸಿದ್ದವು. ಅವುಗಳನ್ನು ಎಚ್ಚರಿಸಲು ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ, ಅವರು ಬಂದು ತಮಟೆ ಬಡಿದು ಆನೆಗಳನ್ನು ಎಬ್ಬಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.