ಫಿಲಿಪ್ಪೀನ್ಸ್ನಲ್ಲಿ ಪ್ರವಾಹ: ಸಾವಿನ ಸಂಖ್ಯೆ 51ಕ್ಕೆ ಏರಿಕೆ
Team Udayavani, Jan 2, 2023, 9:15 PM IST
ಮನಿಲಾ: ಫಿಲಿಪ್ಪೀನ್ಸ್ನಲ್ಲಿ ಭಾನುವಾರ ಉಂಟಾದ ಪ್ರವಾಹದಲ್ಲಿ ಅಸುನೀಗಿದವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಇತರೆ 19 ಮಂದಿ ಕಣ್ಮರೆಯಾಗಿದ್ದಾರೆ ಎಂದು ಫಿಲಿಪ್ಪೀನ್ಸ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ಉತ್ತರ ಮಿಂಡಾನೊವಾ ಪ್ರದೇಶವೊಂದರಲ್ಲೇ 25 ಮಂದಿ ಸಾವಿಗೀಡಾಗಿದ್ದಾರೆ. ಪ್ರವಾಹದಿಂದ ಸುಮಾರು 6 ಲಕ್ಷ ಜನರು ಪೀಡಿತರಾಗಿದ್ದಾರೆ. 8,600ಕ್ಕೂ ಹೆಚ್ಚು ಜನರಿಗೆ ತಾತ್ಕಾಲಿಕ ಶೆಡ್ಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. 4,500ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಉತ್ತರ ಮಿಂಡಾನೊವಾದ ಮಿಸಾಮಿಸ್ ಆಕ್ಸಿಡೆಂಟಲ್ ಪ್ರಾಂತ್ಯದಲ್ಲಿ ನಾಗರಿಕರ ಮನೆಗಳಿಗೆ ನೀರು ನುಗ್ಗಿದೆ. ಸಮುದ್ರ ತೀರದ ಕಾಬೊಲ್-ಅನೊನನ್ ಗ್ರಾಮದಲ್ಲಿ ತೆಂಗಿನ ಮರಗಳು ಬುಡಸಮೇತ ಕಿತ್ತು ಬಂದಿದ್ದು, ಗುಡಿಸಲುಗಳು ನೆಲಸಮವಾಗಿವೆ.