ಚಾರ್ಮಾಡಿ: ಟಿಟಿ, ತರಕಾರಿ ಸಾಗಾಟ ವಾಹನ ಪಲ್ಟಿ
Team Udayavani, Jun 11, 2023, 5:34 AM IST
ಬೆಳ್ತಂಗಡಿ: ಕೊಟ್ಟಿಗೆಹಾರ ಕಡೆಯಿಂದ ಉಜಿರೆಯತ್ತ ಸಂಚರಿಸುತ್ತಿದ್ದ ಟೆಂಪೋ ಟ್ರಾವೆಲರ್ ಮತ್ತು ತರಕಾರಿ ಸಾಗಾಟದ ವಾಹನ ಚಾರ್ಮಾಡಿ ಪೇಟೆಯಲ್ಲಿ ಪಲ್ಟಿಯಾದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೇಟೆ ಪ್ರದೇಶದ ಅಂಗಡಿಯೊಂದರ ಮುಂಭಾಗ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಟಿಟಿ ಅಂಗಡಿಯಿಂದ ಅನತಿ ದೂರದಲ್ಲಿ ಪಲ್ಟಿಯಾದ ಕಾರಣ ಹೆಚ್ಚಿನ ಅನಾಹುತವಾಗಿಲ್ಲ.
ಈ ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲಿ ಇಲ್ಲಿಂದ 100 ಮೀ. ಮುಂಭಾಗದಲ್ಲಿ ತರಕಾರಿ ಸಾಗಾಟದ ವಾಹನ ರಸ್ತೆ ಬದಿಗೆ ಜಾರಿ ಚರಂಡಿಗೆ ಬಿದ್ದಿದೆ. ಎರಡು ಘಟನೆಗಳಲ್ಲಿ ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ.
ಚಾರ್ಮಾಡಿ ಒಂದನೇ ತಿರುವಿನಿಂದ ಚಾರ್ಮಾಡಿ ಹಳ್ಳದವರೆಗಿನ 3 ಕಿಮೀ ವ್ಯಾಪ್ತಿಯ ರಸ್ತೆ ಕಳೆದ ನಾಲ್ಕು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ. ಈ 3 ಕಿಮೀ. ವ್ಯಾಪ್ತಿಯಲ್ಲಿ ಹಾಕಲಾಗಿರುವ ಡಾಮರು ವಿಪರೀತ ನಯವಾಗಿದ್ದು ಮಳೆಯ ಸಮಯ ಇಲ್ಲಿ ವಾಹನಗಳು ಚಾಲಕರ ಹತೋಟಿಗೆ ಸಿಗದೇ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ.