ಉದ್ಯಾವರ : ಸೇತುವೆ ಮೇಲೆ ಟೆಂಪೋ ಸರ್ಕಸ್!
Team Udayavani, May 22, 2017, 2:53 PM IST
ಕಾಪು: ರಾ. ಹೆ. 66ರ ಉದ್ಯಾವರ ಸೇತುವೆಯ ಮೇಲೆ ಟಯರ್ ಸಿಡಿದು, ಚಾಲಕನ ನಿಯಂತ್ರಣ ತಪ್ಪಿದ ಮಿನಿ ಟೆಂಪೋ ಸೇತುವೆ ಮೇಲಿನಿಂದ ಕೆಳಕ್ಕೆ ಧುಮುಕಲೆತ್ನಿಸಿದ ಘಟನೆ ರವಿವಾರ ಬೆಳಗ್ಗೆ ಸಂಭವಿಸಿದೆ.
ಉಡುಪಿಯಿಂದ ಮಂಗಳೂರು ಕಡೆಗೆ ಮಿನಿ ಟೆಂಪೋ ವೇಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲೇ ಟಯರ್ ಸ್ಫೋಟಗೊಂಡ ಕಾರಣ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ನದಿಯತ್ತ ಹಾರುವ ಯತ್ನ ಮಾಡಿದೆ. ಈ ಸಂದರ್ಭ ಟೆಂಪೋದ ಚಕ್ರ ಸೇತುವೆಯ ದಂಡೆಗೆ ಸಿಲುಕಿಕೊಂಡ ಪರಿಣಾಮ ಟೆಂಪೋ ಕೆಳಕ್ಕೆ ಬೀಳದೇ ನೇತಾಡಿಕೊಂಡು ನಿಂತಿದ್ದು, ಟೆಂಪೋ ಚಾಲಕ ತತ್ಕ್ಷಣ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೇತುವೆಯ ಮೇಲೆ ಟೆಂಪೋ ಸರ್ಕಸ್ ಮಾಡುತ್ತಿದ್ದ ದೃಶ್ಯವನ್ನು ನೋಡಲು ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದು, ಬಳಿಕ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಕ್ರೇನ್ ಮೂಲಕವಾಗಿ ಟೆಂಪೋವನ್ನು ಸೇತುವೆ ಮೇಲಿಂದ ಕೆಳಕ್ಕಿಳಿಸಿದ್ದಾರೆ.