ಪವಿತ್ರ ಮೆಕ್ಕಾ ಬಳಿ ಭಾರೀ ದಾಳಿ ವಿಫಲ;ಆತ್ಮಾಹುತಿ ದಾಳಿಕೋರ ಸ್ಫೋಟ
Team Udayavani, Jun 24, 2017, 9:18 AM IST
ರಿಯಾದ್: ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದಲ್ಲಿ ಭಾರೀ ದಾಳಿಯ ಸಂಚನ್ನು ಸೌದಿ ಅರೆಬೀಯಾದ ಭದ್ರತಾ ಪಡೆಗಳು ವಿಫಲಗೊಳಿಸಿದ್ದು , ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡ ಘಟನೆ ಶುಕ್ರವಾರದ ಪ್ರಾರ್ಥನೆ ವೇಳೆ ನಡೆದಿದೆ.
ಮೆಕ್ಕಾಕ್ಕೆ ಬಂದ ಯಾತ್ರಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಭಾರೀ ದಾಳಿಗೆ ಸಿದ್ಧವಾಗಿ ಮನೆಯೊಂದರಲ್ಲಿ ಅಡಗಿದ್ದ ಉಗ್ರನ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿ ಗುಂಡಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಉಗ್ರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಪರಿಣಾಮವಾಗಿ ಐವರು ಭದ್ರತಾ ಸಿಬಂದಿಗಳು ಮತ್ತು 6 ಮಂದಿ ಒತ್ತೆಯಾಳುಗಳಾಗಿ ಇರಿಸಿಕೊಂಡ ವಿದೇಶಿ ಯಾತ್ರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ಬಳಿಕ ಓರ್ವ ಮಹಿಳೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಮೆಕ್ಕಾ, ಮತ್ತು ಜೆಡ್ಡಾದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.