ಲೂಧಿಯಾನ ಉದ್ಯಮಿ ಬ್ಯಾಂಕ್ ಖಾತೆ ಹ್ಯಾಕ್: 70 ಲಕ್ಷ ರೂ. ಲಪಟಾವಣೆ
Team Udayavani, Jul 20, 2017, 4:07 PM IST
ಲೂಧಿಯಾನ : ಲೂಧಿಯಾನದ ಉದ್ಯಮಿಯೋರ್ವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಸುಮಾರು 70 ಲಕ್ಷ ರೂ.ಗಳನ್ನು ಲಪಟಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹ್ಯಾಕರ್ಗಳು ತಾವು ಕದ್ದ ಮೊತ್ತವನ್ನು ಒಂದೇ ದಿನ ಐದು ಬೇರೇ ಬೇರೆ ಖಾತೆಗಳಿಗೆ ಜಮೆ ಮಾಡಿರುವುದು ಪತ್ತೆಯಾಗಿದೆ.
ಈ ಹ್ಯಾಕಿಂಗ್ ಪ್ರಕರಣದ ವಿವರಗಳನ್ನು ನೀಡಿರುವ ಸೈಬರ್ ಕ್ರೈಮ್ ಡಿಸಿಪಿ ಧ್ರುಮನ್ ನಿಂಬ್ಲೆ ಅವರು ಇಲ್ಲಿನ ಸರಳಾ ಚೌಕ್ ಸಮೀಪದ ಜಿಟಿ ರಸ್ತೆಯಲ್ಲಿ ಸಿದ್ಧ ಉಡುಪುಗಳ ಫ್ಯಾಕ್ಟರಿ ನಡೆಸಿಕೊಂಡಿರುವ ಅರುಣ್ ಬೆರಿ ಅವರ ಕ್ಲಾಕ್ ಟವರ್ ಬ್ಯಾಂಕ್ ಶಾಖೆಯಲ್ಲಿನ ಖಾತೆಯನ್ನು ಹ್ಯಾಕ್ ಮಾಡಲಾಗಿ 70 ಲಕ್ಷ ರೂ. ಕದಿಯಲಾಗಿರುವುದಾಗಿ ಹೇಳಿದ್ದಾರೆ.
ಜು.18ರ ನಸುಕಿನ ವೇಳೆ ತನ್ನ ಬ್ಯಾಂಕ್ ಖಾತೆಯಿಂದ 70 ಲಕ್ಷ ರೂ. ಹಣ ತೆಗೆಯಲಾಗಿರುವ ಇ-ಮೇಲ್ ಸಂದೇಶಗಳು ತನಗೆ ಬಂದಿದ್ದವು ಎಂದು ಬೆರಿ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.