ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು; 37 ಲಕ್ಷ ಮೌಲ್ಯದ ಅಕ್ಕಿ ಜಪ್ತಿ
Team Udayavani, Aug 24, 2017, 5:49 PM IST
ಹಾವೇರಿ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನಿಟ್ಟ ಸುಮಾರು 158 ಕ್ವಿಂಟಾಲ್ ಅಕ್ಕಿಯನ್ನು ಹಾನಗಲ್ ತಹಶೀಲ್ದಾರ್ ಮತ್ತು ಪೊಲೀಸರು ಅಕ್ಕಿ ಆಲೂರು ಗೋದಾಮಿನಿಂದ ಜಪ್ತಿ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಲೈಸೆನ್ಸ್ ಪಡೆಯದೇ ಅಕ್ರಮವಾಗಿ ಅಕ್ಕಿ ಸಂಗ್ರಹ ಮತ್ತು ಮಾರಾಟ ಮಾಡಿರುವ ಆರೋಪದ ಮೇಲೆ ಅಕ್ಕಿ ವ್ಯಾಪಾರಿ, ಗೋದಾಮಿನ ಮಾಲೀಕ ಈರಣ್ಣ ಮಳಗಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಬ್ರಾಂಡೆಡ್ ಚೀಲಗಳಲ್ಲಿ ತುಂಬಿಸಿ ಇಡುತ್ತಿದ್ದ. ಬೇರೆ ಬೇರೆ ಕಂಪನಿಯ 1151 ಕ್ವಿಂಟಾಲ್ ಅಕ್ಕಿಯನ್ನು ಕೂಡಾ ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಸ್ವಸ್ತಿಕ್, ಕಿಸಾನ್ ಕಂಪನಿ ಹೆಸರಿನಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈರಣ್ಣ ಮಳಗಿಯಿಂದ 37 ಲಕ್ಷ ರೂಪಾಯಿ ಮೌಲ್ಯದ ಅಕ್ಕಿ ಹಾಗೂ 2 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ವಿವರಿಸಿದೆ.