ಪ್ರೊ ಕಬಡ್ಡಿ : ಪ್ರಶಾಂತ್ ರೈಗೆ 79 ಲಕ್ಷ ರೂ.
Team Udayavani, Jun 1, 2018, 6:00 AM IST
ಮುಂಬಯಿ: 2018ನೇ ಸಾಲಿನ ಪ್ರೊ ಕಬಡ್ಡಿ ಹರಾಜು ಪಕ್ರಿಯೆ ಗುರುವಾರಕ್ಕೆ ಮುಕ್ತಾಯವಾಗಿದೆ. ಹಣದ ಹರಿವಿನ ದೃಷ್ಟಿಯಿಂದ ದೇಶಿ ಕ್ರೀಡೆ ಕಬಡ್ಡಿ ಪಾಲಿಗೆ ಇದು ಐತಿಹಾಸಿಕ ಗಳಿಗೆಯಾಗಿದೆ.
ಎರಡು ದಿನದಲ್ಲಿ ಒಟ್ಟು 422 ಆಟಗಾರರು ಹರಾಜಿಗೆ ಲಭ್ಯರಿದ್ದರು. ಆ ಪೈಕಿ 181 ಆಟಗಾರರು ಮಾತ್ರ ಮಾರಾಟ ವಾದರು. ಮೊದಲ ದಿನ 6 ಮಂದಿ ಒಂದು ಕೋಟಿ ರೂ. ಮೊತ್ತ ಪಡೆದರೆ 2ನೇ ದಿನ ಯಾರೂ ಕೋಟಿ ರೂ. ಗಡಿ ಮುಟ್ಟಲಿಲ್ಲ. ಕರ್ನಾಟಕದ ಪ್ರಶಾಂತ್ ರೈ 79 ಲಕ್ಷ ರೂ. ಪಡೆದಿದ್ದೇ 2ನೇ ದಿನದ ಗರಿಷ್ಠ ಗಳಿಕೆಯಾಗಿದೆ.
ಹರಾಜು ಪಟ್ಟಿಯಲ್ಲಿ ಬಿ ವಿಭಾಗದಲ್ಲಿದ್ದ ಪುತ್ತೂರಿನ ಪ್ರಶಾಂತ್ ರೈ ಖರೀದಿಗೆ ಫ್ರಾಂಚೈಸಿಗಳು ಭರ್ಜರಿ ಪೈಪೋಟಿ ನಡೆಸಿದವು. ಹೀಗಾಗಿ ಈ ವಿಭಾಗದಲ್ಲೇ ಗರಿಷ್ಠ ಮೊತ್ತ ಕಂಡರು. ಅವರನ್ನು ಯುಪಿ ಯೋಧಾಸ್ ತಂಡ ಖರೀದಿಸಿತು. ಚಂದ್ರನ್ ರಂಜಿತ್ ಅವರನ್ನು ಡೆಲ್ಲಿ 61.25 ಲಕ್ಷ ರೂ.ಗೆ, ಪವನ್ ಕುಮಾರ್ ಅವರನ್ನು ಬೆಂಗಳೂರು 52 ಲಕ್ಷ ರೂ.ಗೆ, ವಿಕಾಶ್ ಖಂಡೋಲಾ ಅವರನ್ನು ಹರ್ಯಾಣ 47 ಲಕ್ಷ ರೂ.ಗೆ ಖರೀದಿಸಿತು.