ಷೇರು ಮಾರುಕಟ್ಟೆಯಲ್ಲಿ ರಕ್ತಪಾತ
Team Udayavani, Sep 22, 2018, 6:00 AM IST
ಮುಂಬಯಿ: ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಷೇರುಗಳ ಮೌಲ್ಯಕುಸಿತದಿಂದಾಗಿ ಶುಕ್ರವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ನಡೆದಿದೆ. ದಿನದ ವಹಿವಾಟಿನ ಮಧ್ಯೆ ಸೆನ್ಸೆಕ್ಸ್ 1,000 ಅಂಕಕ್ಕೂ ಹೆಚ್ಚು ಕುಸಿದಿದ್ದು, ನಿಫ್ಟಿ 11,000ದ ಗಡಿಯನ್ನೂ ಮೀರಿ ಇಳಿದಿತ್ತು. ಡಿಎಚ್‌ಎಫ್ಎಲ್ ಸಂಸ್ಥೆಯಲ್ಲಿನ ಸ್ಥಿತ್ಯಂತರದಿಂದಾಗಿ ಕಂಪನಿಯ ಷೇರು ಮೌಲ್ಯ ಶೇ.50ರಷ್ಟು ಶುಕ್ರವಾರ ಒಂದೇ ದಿನ ಕುಸಿದಿದೆ. ದಿನದ ಕೊನೆಯಲ್ಲಿ ಸ್ವಲ್ಪ ಚೇತರಿಕೆ ಕಂಡು, ಸೆನ್ಸೆಕ್ಸ್ 279.62 (ಶೇ. 0.75) ಅಂಕ ಕುಸಿದು 36,841.60 ಕ್ಕೆ ತಲುಪಿದೆ.
ಇತ್ತೀಚೆಗೆ ನಷ್ಟಕ್ಕೊಳಗಾಗಿರುವ ಐಎಲ್ ಆ್ಯಂಡ್ ಎಫ್ಎಸ್‌ನಲ್ಲಿ ಡಿಎಚ್‌ಎಫ್ಎಲ್ ಹೂಡಿಕೆ ಹೊಂದಿರುವುದು ಹಾಗೂ ಮ್ಯೂಚುವಲ್ ಫಂಡ್ ವಹಿವಾಟನ್ನು ಮಾರಾಟ ಮಾಡಿರುವುದು ಷೇರುದಾರರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದರ ಪ್ರಭಾವ ಇತರ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೇಲೂ ಆಗಿದ್ದು, ಬಹುತೇಕ ಎನ್‌ಬಿಎಫ್ಸಿ ಷೇರುಗಳು ಕುಸಿತ ಕಂಡಿವೆ. ಸಿಇಒ ರಾಣಾ ಕಪೂರ್‌ರನ್ನು ಮತ್ತೂಂದು ಅವಧಿಗೆ ಮುಂದುವರಿಸಲು ಆರ್‌ಬಿಐ ನಿರಾಕರಿಸಿರುವುದ ರಿಂದಾಗಿ ಯೆಸ್ ಬ್ಯಾಂಕ್ ಷೇರುಗಳು ಶೇ. 19ರಷ್ಟು ಕುಸಿದಿದೆ. ಇನ್ಫೋಸಿಸ್, ಎಚ್‌ಯುಎಲ್ ಹಾಗೂ ಟಿಸಿಎಸ್ ಷೇರು ಕೂಡ ಇಳಿಕೆ ಕಂಡಿದೆ.
ದಿನದ ಆರಂಭದಲ್ಲಿ ಏರಿಕೆ ಕಂಡಿದ್ದ ಮಾರುಕಟ್ಟೆ, ಹಠಾತ್ತನೆ 1127 ಅಂಕ ಕುಸಿದಿತ್ತು. ದಿನದ ಮಧ್ಯದಲ್ಲಿ ಸೆನ್ಸೆಕ್ಸ್ 35,993.64 ತಲುಪಿತ್ತು. ಹೀಗಾಗಿ ಸೆನ್ಸೆಕ್ಸ್ ದಿನದಲ್ಲಿ ಏರಿದ ಹಾಗೂ ಇಳಿದ ಅಂತರ 1495 ಅಂಕ ಆಗಿದೆ. ಇನ್ನೊಂದೆಡೆ ಎನ್‌ಎಸ್‌ಇ ನಿಫ್ಟಿ ಕೂಡ 91.25 ಅಂಕ ಕುಸಿದು, 11,143.10 ಕ್ಕೆ ತಲುಪಿದೆ. ಕಳೆದ ನಾಲ್ಕು ಸೆಷನ್‌ಗಳಲ್ಲಿ ಮಾರುಕಟ್ಟೆ ಸತತವಾಗಿ ಕುಸಿಯುತ್ತಿದ್ದು, ಹೂಡಿಕೆ ದಾರರು 5.6 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.