ಖಾಸಗಿ ವಲಯದಲ್ಲೂ ಎಸ್ಸಿ, ಎಸ್ಟಿ ಕೋಟಾ?
Team Udayavani, Oct 5, 2018, 8:05 AM IST
ನವದೆಹಲಿ: ಖಾಸಗಿ ಕ್ಷೇತ್ರದಲ್ಲಿ ಕೂಡ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟಿದೆಯೇ?. ಹೌದು ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ದೇಶದ ಖಾಸಗಿ ಕ್ಷೇತ್ರದ ಉದ್ಯೋಗದಲ್ಲಿ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ಕಲ್ಪಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಇರಾದೆ ವ್ಯಕ್ತಪಡಿಸಿದ್ದು, ಈ ಕುರಿತು ಖಾಸಗಿ ವಲಯಗಳಿಂದ ಮಾಹಿತಿ ಕೋರಿದ್ದಾರೆ ಎನ್ನಲಾಗಿದೆ.
ಗುರುವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ, ದೇಶಾದ್ಯಂತ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಎಸ್ಸಿ, ಎಸ್ಟಿ ಉದ್ಯೋಗಿಗಳ ಕುರಿತು ಡಿಸೆಂಬರ್ವೊಳಗೆ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖೀಸಿ ಟೈಮ್ಸ್ ನೌ ವರದಿ ಮಾಡಿದೆ. ಇತ್ತೀಚೆಗೆ ಪ್ರಧಾನಿ ಕಾರ್ಯಾಲಯವು ಖಾಸಗಿ ಕ್ಷೇತ್ರದ ಪ್ರಮುಖರೊಂದಿಗೆ ನಡೆಸಿದ್ದ ಸಭೆಯಲ್ಲಿ, ಎಸ್ಸಿ ಹಾಗೂ ಎಸ್ಟಿ ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸುವಲ್ಲಿ ಖಾಸಗಿ ಕ್ಷೇತ್ರಗಳ ಬದ್ಧತೆಯ ಬಗ್ಗೆ ಚರ್ಚಿಸಲಾಗಿತ್ತು.