ಪುನೇರಿ ವಿರುದ್ಧ ಜೈಪುರ್ ಜಯಭೇರಿ
Team Udayavani, Dec 15, 2018, 11:49 AM IST
ಪಂಚಕುಲ: ಶುಕ್ರವಾರ ಆರಂಭ ಗೊಂಡ ಹರ್ಯಾಣದ ಪಂಚಕುಲ ಚರಣದ ಪ್ರೊ ಕಬಡ್ಡಿ ಹಣಾಹಣಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ 36-23 ಅಂಕಗಳ ಅಂತರದಿಂದ ಪುನೇರಿ ಪಲ್ಟಾನ್ ತಂಡವನ್ನು ಸೋಲಿಸಿದೆ. ಈಗಾಗಲೇ ಅಂಕಪಟ್ಟಿಯಲ್ಲಿ ಪಾತಾಳದಲ್ಲಿರುವ ಜೈಪುರ್ ತನ್ನ ಗೆಲುವನ್ನು ಐದಕ್ಕೆ ಹೆಚ್ಚಿಸಿಕೊಂಡಿತು. ಇದೇ ವೇಳೆ ನಾಕೌಟ್ ಸುತ್ತಿಗೆ ಪ್ರವೇಶಿಸುವ ಕನಸು ಕಾಣುತ್ತಿರುವ ಪುನೇರಿಗೆ ಈ ಸೋಲಿನಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ.
ಜೈಪುರ ತಂಡದ ಪರ ಸುನಿಲ್ ಸಿದ್ಧಗಾವಲಿ (8 ಅಂಕ) ಹಾಗೂ ದೀಪಕ್ ಹೂಡಾ (8 ಅಂಕ) ರೈಡಿಂಗ್ನಿಂದ ತಂಡಕ್ಕೆ ಭರ್ಜರಿ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾದರು. ಟ್ಯಾಕಲ್ನಲ್ಲಿ ಅಮಿತ್ ಕುಮಾರ್ (5 ಅಂಕ) ತಂಡಕ್ಕೆ ನೆರವಾದರು. ಪುನೇರಿ ಪಲ್ಟಾನ್ ತಂಡವಾಗಿ ಎಲ್ಲ ವಿಭಾಗದಲ್ಲೂ ವಿಫಲವಾಯಿತು. ತಂಡದ ಪರ ರೈಡರ್ ಜಿ.ಬಿ. ಮೋರೆ (5 ಅಂಕ) ಹಾಗೂ ಸಂದೀಪ್ ನರ್ವಲ್ (5 ಅಂಕ) ಅಂಕ ಆಲ್ರೌಂಡರ್ ಆಟದ ಮೂಲಕ ಗಮನ ಸೆಳೆದರು. ಉಳಿದಂತೆ ಎಲ್ಲ ಆಟಗಾರರು ವಿಫಲರಾದರು. ತೀವ್ರ ಪೈಪೋಟಿಯಿಂದ ಸಾಗಿದ ದಿನದ ದ್ವಿತೀಯ ಪಂದ್ಯದಲ್ಲಿ ಬೆಂಗಾಲ್ 28-21 ಅಂಕಗಳಿಂದ ತಮಿಳ್ ತಲೈವಾಸನ್ನು ಮಣಿಸಿತು.