ಆಧಾರ್ ಸ್ಪರ್ಧೆ ಅಂತಿಮ ದಿನಾಂಕ ಮುಂದೂಡಿಕೆ
Team Udayavani, Jul 12, 2019, 5:36 AM IST
ನವದೆಹಲಿ: ಆಧಾರ್ ಸೇವೆಗಳನ್ನು ವಿವರಿಸುವ ವಿಡಿಯೋ ತಯಾರಿಕೆ ಸ್ಪರ್ಧೆಗೆ ಕೇಂದ್ರ ಸರ್ಕಾರ ಅಂತಿಮ ದಿನಾಂಕವನ್ನು 14 ದಿನಗಳ ಕಾಲ ಮುಂದೂಡಿದ್ದು, ಜುಲೈ 22ರ ಒಳಗೆ ವಿಡಿಯೋಗಳನ್ನು ಸ್ಪರ್ಧೆಗೆ ಸಲ್ಲಿಕೆ ಮಾಡಬಹುದಾಗಿದೆ. ಮೈ ಆಧಾರ್ ಆನ್ಲೈನ್ ಎಂಬ ಈ ಸ್ಪರ್ಧೆ ಅಡಿ 14 ವಿಭಾಗಗಳಿದ್ದು, ಯಾವುದೇ ಒಂದು ವಿಭಾಗದಲ್ಲಿ 30 ರಿಂದ 120 ಸೆಕೆಂಡುಗಳ ವಿಡಿಯೋವನ್ನು ನಿರ್ಮಿಸಿ ಸಲ್ಲಿಸಬಹುದು. ವಿಜೇತರಿಗೆ 30 ಸಾವಿರ ರೂ. ಬಹುಮಾನ ನೀಡಲು ನಿರ್ಧರಿಸಲಾಗಿದ್ದು, ಆ.31 ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ.
ಜನರಿಗೆ ಆಧಾರ್ ಬಳಕೆ ಕುರಿತು ವಿವರಿಸುವ ರೀತಿಯಲ್ಲಿ ಈ ವಿಡಿಯೋ ಇರಬೇಕು. ವಿಡಿಯೋವನ್ನು ಯೂಟ್ಯೂಬ್, ಗೂಗಲ್ ಡ್ರೈವ್ ಅಥವಾ ಫೈಲ್ಶೇರಿಂಗ್ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಿ, ಅದರ ಲಿಂಕ್ ಅನ್ನು ಆಧಾರ್ ಪ್ರಾಧಿಕಾರಕ್ಕೆ ಕಳುಹಿಸಬೇಕು. ಆಧಾರ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.