ಸೆಂಟಿಮೆಂಟ್ ನಿರ್ದೇಶಕನ ಆ್ಯಕ್ಷನ್ ಸಿನಿಮಾ
ಜಗ್ಗಿ ಜಗನ್ನಾಥನ ಮಾಸ್ ಟ್ರೇಲರ್
Team Udayavani, Aug 20, 2019, 3:03 AM IST
ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದವರು ನಿರ್ದೇಶಕ ಓಂ ಸಾಯಿಪ್ರಕಾಶ್. ಅವರು ಮಾಡಿರುವ ಸೆಂಟಿಮೆಂಟ್ ಚಿತ್ರಗಳು ಯಶಸ್ಸು ಕಾಣುವ ಮೂಲಕ ಸೆಂಟಿಮೆಂಟ್ ನಿರ್ದೇಶಕ ಎಂಬ ಟ್ಯಾಗ್ಲೈನ್ ಕೂಡಾ ಅವರ ಹೆಸರಿನ ಮುಂದೆ ಸೇರಿಕೊಂಡಿದೆ. ಆದರೆ, ಈಗ ಸಾಯಿಪ್ರಕಾಶ್ ಪಕ್ಕಾ ಆ್ಯಕ್ಷನ್ ಸಿನಿಮಾ ಮಾಡಿದ್ದಾರೆ. ಅದು “ಜಗ್ಗಿ ಜಗನ್ನಾಥ್’. ಸದ್ದಿಲ್ಲದೇ ಸಿನಿಮಾ ಮಾಡಿರುವ ಸಾಯಿಪ್ರಕಾಶ್ ಈಗ ಚಿತ್ರದ ಟ್ರೇಲರ್ ಕೂಡಾ ಬಿಡುಗಡೆ ಮಾಡಿದ್ದಾರೆ.
ಸಾಯಿಕುಮಾರ್ ಈ ಚಿತ್ರದ ನಾಯಕ. ಲಿಖಿತ್ ರಾಜ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಲಿಖಿತ್ ರಾಜ್ ಹಾಗೂ ಸಾಯಿಪ್ರಕಾಶ್ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ ಡೈಲಾಗ್ಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದಲ್ಲಿ ಭೂಗತ ಲೋಕದ ಕಥೆ ಇದ್ದರೂ, ಚಿತ್ರದಲ್ಲಿರುವ ಹೃದಯ ಕಲಕುವ ತಾಯಿ-ಮಗನ ಸೆಂಟಿಮೆಂಟ್ ಸೀನ್ಗಳು ಕೂಡ ಗಮನ ಸೆಳೆಯುತ್ತವೆ ಎಂಬುದು ಚಿತ್ರತಂಡ ಮಾತು.
ಈಗಾಗಲೇ “ಜಗ್ಗಿ ಜಗನ್ನಾಥ್’ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಕ್ತಾಯಗೊಂಡಿದ್ದು, ಇತ್ತೀಚೆಗಷ್ಟೇ ಚಿತ್ರ ಸೆನ್ಸಾರ್ ಕೂಡ ಆಗಿದೆ. ಒಬ್ಬ ಸಾಮಾನ್ಯ ಯುವಕ ಹೇಗೆ ಅಘೋರಿಯಾದ ಎನ್ನುವ ಕುತೂಹಲಕರವಾದ ಕಥಾಹಂದರ ಚಿತ್ರದಲ್ಲಿದ್ದು, ಇದೇ ಥರದ ಹಲವಾರು ವಿಶೇಷತೆಗಳು ಚಿತ್ರದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿವೆ. ಹೆಚ್.ಜಯರಾಜು, ಜಿ.ಶಾರದಾ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಎಂ.ನೀಲ್ ಸಂಗೀತ, ರೇಣುಕುಮಾರ್ ಛಾಯಾಗ್ರಹಣ,
ಯೋಗರಾಜ್ಭಟ್, ಜಯಂತ್ ಕಾಯ್ಕಿಣಿ, ವಿಜಯ್ ವಿ., ಸಾಯಿ ಸರ್ವೇಶ್ ಸಾಹಿತ್ಯ, ಶ್ರೀನಿವಾಸ್ ಪಿ. ಬಾಬು ಸಂಕಲನ, ಅರವಿಂದ್ ಡಿಸ್ಕೊ ಡಿಸಿಲ್ವ ನೃತ್ಯ ನಿರ್ದೇಶನ, ಜಾನಿ ಮಾಸ್ಟರ್, ಕೌರವ ವೆಂಕಟೇಶ್ ಸಾಹಸವಿದೆ. ತಾರಾಬಳಗದಲ್ಲಿ ಲಿಖಿತ್ ರಾಜ್, ದುನಿಯಾ ರಶ್ಮಿ, ಸಾಯಿಕುಮಾರ್, ತಬಲ ನಾಣಿ, ಪದ್ಮಜಾ ರಾವ್, ಲಯ ಕೋಕಿಲ, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು ನಟಿಸಿದ್ದಾರೆ.