ಕೆಮ್ಮಿದ್ದರೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿ
Team Udayavani, Mar 19, 2020, 3:03 AM IST
ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಲ್ಲಿ ಜ್ವರ, ಕೆಮ್ಮು, ನೆಗಡಿ ಕಂಡು ಬಂದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ, ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ನಿರ್ದೇಶನ ನೀಡಲಾಗಿದೆ.
ಅತಿ ಹೆಚ್ಚು ಕೋವಿಡ್-19 ವ್ಯಾಪಿಸಿರುವ ಮತ್ತು ಸೂಕ್ಷ್ಮ ಪ್ರದೇಶದ ಜಿಲ್ಲೆಗಳಲ್ಲಿ ಪ್ರತಿ ಕೊಠಡಿಗೆ 15ರಿಂದ 20 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಬೇಕು.
ವಿದ್ಯಾರ್ಥಿಗಳು, ಪರೀಕ್ಷಾ ಕಾರ್ಯಕ್ಕೆ ಹಾಜರಾಗುವ ಅಧಿಕಾರಿ, ಶಿಕ್ಷಕರು, ಸಿಬ್ಬಂದಿ ವರ್ಗದವರು ಸ್ಯಾನಿಟೈಸರ್ ಮೂಲಕ ಕೈಗಳನ್ನು ಸ್ವತ್ಛಗೊಳಿಸಿಕೊಂಡು ಪರೀಕ್ಷಾ ಕೊಠಡಿಯೊಳಗೆ ತೆರಳುವಂತೆ ವ್ಯವಸ್ಥೆ ಮಾಡಬೇಕು. ಮಾಸ್ಕ್ ಧರಿಸಲು ಅವಕಾಶ ನೀಡಬೇಕು ಎಂದು ಸೂಚಿಸಲಾಗಿದೆ. ಮಾ.27ರಿಂದ ಏ.9ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ.