ಮಂಗಳೂರು: ಪಿಪಿಇ ಕಿಟ್ ಧರಿಸಿದ ಸಿಟಿ ಬಸ್ ನಿರ್ವಾಹಕ!
Team Udayavani, Jun 6, 2020, 8:38 AM IST
ಮಂಗಳೂರು: ಕೋವಿಡ್ ಆತಂಕದ ನಡುವೆಯೇ ನಗರದಲ್ಲಿ ಸಿಟಿ ಬಸ್ ಸಂಚಾರ ಆರಂಭಗೊಂಡಿದ್ದು, ಬಸ್ ನಿರ್ವಾಹಕರು ಪಿಪಿಇ ಕಿಟ್ ಧರಿಸುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಸಿಟಿ ಬಸ್ ಅಂದ ಮೇಲೆ ದಿನನಿತ್ಯ ನೂರಾರು ಮಂದಿ ಪ್ರಯಾಣಿಕರು ಸಂಚರಿಸುತ್ತಾರೆ. ಹೀಗಿರುವಾಗ ಕೋವಿಡ್ ರೋಗದ ಬಗ್ಗೆ ಮುನ್ನೆಚ್ಚರಿಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಮಂಗಳೂರಿನ ಸ್ಟೇಟ್ಬ್ಯಾಂಕ್ ಬಸ್ ನಿಲ್ದಾಣದಿಂದ ಶಕ್ತಿನಗರಕ್ಕೆ ತೆರಳುವ 6ಎ ನಂಬರ್ನ ಸೈಶಾ ಹೆಸರಿನ ಸಿಟಿ ಬಸ್ನ ನಿರ್ವಾಹಕ ರಿಗೆ ಬಸ್ ಮಾಲಕರು ಪಿಪಿಇ ಕಿಟ್ ವಿತರಿಸಿದ್ದಾರೆ.
ಈ ಬಗ್ಗೆ ಬಸ್ ಮಾಲಕ ನಿತಿನ್ ಶೆಟ್ಟಿ
ಪ್ರತಿಕ್ರಿಯಿಸಿ, “ನಮ್ಮಲ್ಲಿ ಒಟ್ಟು 8 ಬಸ್ಗಳಿವೆ. ಈ ಪೈಕಿ 6 ಶಕ್ತಿನಗರಕ್ಕೆ, ತಲಾ ಒಂದೊಂದು ಕಟೀಲು ಮತ್ತು ಕಾವೂರು ಪ್ರದೇಶಕ್ಕೆ ತೆರಳುತ್ತದೆ. ಪ್ರಸ್ತುತ ಕೋವಿಡ್ ಹಿನ್ನೆಲೆಯಲ್ಲಿ ಒಂದು ಬಸ್ ಸಂಚರಿಸುತ್ತಿದ್ದು, ನಿರ್ವಾಹಕರಿಗೆ ಎರಡು ಜತೆ ವಾಶೆಬಲ್ ಪಿಪಿಇ ಕಿಟ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ 8 ಬಸ್ಸುಗಳ ನಿರ್ವಾಹಕರಿಗೂ ಈ ಕಿಟ್ ನೀಡುತ್ತೇವೆ’ ಎಂದು ತಿಳಿಸಿದ್ದಾರೆ.