ಭಾರತೀಯ ಮೂಲದ ದಂಪತಿ ಹತ್ಯೆಗೈದ ಪಾಕ್ ವ್ಯಕ್ತಿ; ಇಬ್ಬರು ಹೆಣ್ಮಕ್ಕಳು ಬಚಾವ್
ಘಟನೆ ನಡೆದ 24 ಗಂಟೆಯೊಳಗೆ ದುಬೈ ಪೊಲೀಸರು ಹಂತಕ ಪಾಕ್ ವ್ಯಕ್ತಿಯನ್ನು ಬಂಧಿಸಿದ್ದರು.
Team Udayavani, Jun 24, 2020, 6:18 PM IST
Representative Image
ದುಬೈ:ಭಾರತೀಯ ಮೂಲದ ಉದ್ಯಮಿ ಹಾಗೂ ಪತ್ನಿಯನ್ನು ಪಾಕಿಸ್ತಾನಿ ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ದುಬೈನಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಉದ್ಯಮಿ ವಾಸವಾಗಿದ್ದ ವಿಲ್ಲಾಕ್ಕೆ ನುಗ್ಗಿ ದರೋಡೆ ಕೃತ್ಯ ನಡೆಸಿದ ವೇಳೆ ಭಾರತೀಯ ಮೂಲದ ದಂಪತಿಯನ್ನು ಹತ್ಯೆಗೈದಿರುವುದಾಗಿ ವರದಿ ವಿವರಿಸಿದೆ. ಅರೇಬಿಯನ್ ರಾಂಚಸ್ ಪ್ರದೇಶದಲ್ಲಿರುವ ವಿಲ್ಲಾದಲ್ಲಿ ವಾಸವಾಗಿದ್ದ ಹಿರೇನ್ ಅಧಿಯಾ (40ವರ್ಷ) ಹಾಗೂ ಪತ್ನಿ ವಿಧಿ ಅಧಿಯಾ ಸೇರಿದಂತೆ ಇಬ್ಬರೂ ಹತ್ಯೆಗೀಡಾಗಿದ್ದಾರೆ.
ಘಟನೆ ನಡೆದ 24 ಗಂಟೆಯೊಳಗೆ ದುಬೈ ಪೊಲೀಸರು ಹಂತಕ ಪಾಕ್ ವ್ಯಕ್ತಿಯನ್ನು ಬಂಧಿಸಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ. ಹತ್ಯೆ ಪ್ರಕರಣದ ಬಗ್ಗೆ ದಂಪತಿಯ ಪುತ್ರಿ ದುಬೈ ಪೊಲೀಸ್ ಕಮಾಂಡ್ ರೂಂಗೆ ಮಾಹಿತಿ ನೀಡಿರುವುದಾಗಿ ದುಬೈ ಕ್ರಿಮಿನಲ್ ಇನ್ವೆಸ್ಟಿಗೇಶನ್ ಇಲಾಖೆಯ ನಿರ್ದೇಶಕ ಬ್ರಿಗೇಡಿಯರ್ ಜಮಾಲ್ ಅಲ್ ಜಲ್ಲಾಫ್ ತಿಳಿಸಿದ್ದಾರೆ.
ಹಿರೇನ್ ಅಧಿಯಾ ದಂಪತಿಗೆ 18 ಹಾಗೂ 13 ವರ್ಷದ ಇಬ್ಬರು ಹೆಣ್ಣು ಮಕ್ಕಳು ಇದ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಜೂನ್ 18ರಂದು ಶಂಕಿತ ಪಾಕ್ ವ್ಯಕ್ತಿ ವಿಲ್ಲಾದ ಒಳಗೆ ನುಗ್ಗಿ ಮಲಗಿದ್ದ ದಂಪತಿಯನ್ನು ಹತ್ಯೆಗೈದಿದ್ದ ಎಂದು ವರದಿ ವಿವರಿಸಿದೆ.