ತಿಂಗಳ ಕಾಲ ಮಗು ನೋಡಿಕೊಂಡ ಡಾಕ್ಟರ್
Team Udayavani, Jul 17, 2020, 9:40 AM IST
ತಿರುವನಂತಪುರ: ಹೆತ್ತವರ ಅನುಪಸ್ಥಿತಿಯಲ್ಲಿ ಕೇರಳದ ವೈದ್ಯೆ ಆರು ತಿಂಗಳ ಮಗುವನ್ನು ಒಂದು ತಿಂಗಳ ಕಾಲ ಪಾಲನೆ ಮಾಡಿದ್ದಾರೆ. ಎರ್ನಾಕುಳಂ ಮೂಲದ ದಂಪತಿ ಗುರುಗ್ರಾಮದಲ್ಲಿ ನರ್ಸಿಂಗ್ ವೃತ್ತಿಯಲ್ಲಿದ್ದಾರೆ. ಮಗುವಿನ ತಂದೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಾಯಿ ಮಗುವಿನ ಜತೆಯಲ್ಲಿ ಕೊಚ್ಚಿಗೆ ಹಿಂತಿರುಗಿದರು. ಅದೇ ಸಂದರ್ಭದಲ್ಲಿ ತಾಯಿಗೆ ಕೂಡ ಸೋಂಕು ಖಚಿತವಾಯಿತು. ಹೀಗಾಗಿ, 6 ತಿಂಗಳ ಮಗುವನ್ನು ಯಾರು ನೋಡಿಕೊಳ್ಳುವುದು ಎಂದು ತಾಯಿಗೆ ಯೋಚನೆ ಬಂತು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೂಡ ಸೋಂಕಿನ ಹಿನ್ನೆಲೆಯಲ್ಲಿ ಮಗುವನ್ನು ನೋಡಿಕೊಳ್ಳಲು ಹಿಂದೇಟು ಹಾಕುವ ಸ್ಥಿತಿ ಎದುರಾಗಿತ್ತು. ಅದಕ್ಕಾಗಿ, ಬದಲಿ ವ್ಯವಸ್ಥೆಯ ಬಗ್ಗೆ ಶೋಧನೆ ನಡೆಸುತ್ತಿದ್ದರು. ಡಾ.ಮೇರಿ ಅನಿತಾ ಎಂಬವರ ಬಳಿಯಲ್ಲಿ ಸಮಿತಿ ಸದಸ್ಯರು ಮಗುವಿನ ಬಗ್ಗೆ ಪ್ರಸ್ತಾಪಿಸಿದಾಗ ಅವರು ಅದಕ್ಕೊಪ್ಪಿದರು. ಹೀಗಾಗಿ, ದಂಪತಿಯ ಮಗು ಒಂದು ತಿಂಗಳ ಕಾಲ ಡಾ.ಮೇರಿ ಅವರ ಮನೆಯಲ್ಲಿ ಕಾಲ ಕಳೆಯುವಂತಾಯಿತು.
14 ದಿನಗಳ ಕ್ವಾರಂಟೈನ್ ಅನ್ನು ಬುಧವಾರ ಮಗುವಿನ ತಾಯಿ ಮುಕ್ತಾಯಗೊಳಿಸಿದರು. ಅದೇ ಸಂದರ್ಭದಲ್ಲಿ ಡಾ.ಮೇರಿ, ಮಗುವನ್ನು ತಾಯಿಗೆ ನೀಡಿದರು. ತಾಯಿ ಡಾ.ಮೇರಿ ಅವರಿಗೆ ಕೃತಜ್ಞತೆ ಸಮರ್ಪಿಸಿದ್ದಾರೆ.