50 ವರ್ಷಗಳ ಹಿಂದೆ ರೇಪ್: ನಟ ಜಿತೇಂದ್ರ ವಿರುದ್ಧ ಕಸಿನ್ ದೂರು
Team Udayavani, Feb 8, 2018, 3:28 PM IST
ಹೊಸದಿಲ್ಲಿ : ಹಿರಿಯ ಹಿಂದಿ ಚಿತ್ರ ನಟ ಜಿತೇಂದ್ರ ವಿರುದ್ಧ ಆತನ ಸೋದರ ಸಂಬಂಧಿ (cousin) ಅತ್ಯಾಚಾರದ ಆರೋಪ ಹೊರಿಸಿದ್ದಾರೆ.
ನಾನು 18 ವರ್ಷದವಳಿದ್ದಾಗ ಮತ್ತು ಜಿತೇಂದ್ರ 28 ವರ್ಷದವರಿದ್ದಾಗ ನನ್ನನ್ನು ದಿಲ್ಲಿಯಿಂದ ಶಿಮ್ಲಾಕ್ಕೆ ಕರೆಸಿಕೊಂಡು ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಾವು ಒಂದೇ ಕೋಣೆಯಲ್ಲಿ ಇರುವಂತೆ ಮಾಡಿ, ರಾತ್ರಿ ಹೊತ್ತು ಮದ್ಯದ ಅಮಲಿನಲ್ಲಿ ಕೋಣೆ ಸೇರಿದ ಆತ ನಮ್ಮ ಎರಡು ಪ್ರತ್ಯೇಕ ಮಂಚಗಳನ್ನು ಪರಸ್ಪರ ಜೋಡಿಸಿಕೊಂಡು ನಾವು ಒಟ್ಟಿಗೇ ಒಂದೇ ಹಾಸಿಗೆಯಲ್ಲಿ ಮಲಗುವಂತೆ ಮಾಡುವ ಮೂಲಕ ಆತ ನನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಜಿತೇಂದ್ರನ ಸೋದರ ಸಂಬಂಧಿ ಹಿಮಾಚಲ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕರಲ್ಲಿ ದೂರು ದಾಖಲಿಸಿದ್ದಾಳೆ.
ಆಕೆಯ ಪ್ರಕಾರ ಈ ಅತ್ಯಾಚಾರದ ಘಟನೆ ನಡೆದದ್ದು 1971ರ ಜನವರಿಯಲ್ಲಿ.
ಜಿತೇಂದ್ರ ವಿರುದ್ಧದ ಈ ಅತ್ಯಾಚಾರದ ದೂರಿಗೆ ಆತನ ವಕೀಲ ರಿಜ್ವಾನ್ ಸಿದ್ದಿಕೀ ಪ್ರತಿಕ್ರಿಯಿಸಿದ್ದು ಇದು ಸಂಪೂರ್ಣ ಸುಳ್ಳು, ಕಪೋಲ ಕಲ್ಪಿತ, ಸೃಷ್ಟಿಸಲ್ಪಟ್ಟ ಘಟನೆ ಎಂದು ಹೇಳಿದ್ದಾರೆ.
ಬಾಲಿವುಡ್‌ಲೈಫ್ ಡಾಟ್ ಕಾಮ್ ರಿಜ್ವಾನ್ ಸಿದ್ದಿಕೀ ಅವರ ಹೇಳಿಕೆಯನ್ನು ಉಲ್ಲೇಖೀಸಿ ಈ ವಿಷಯವನ್ನು ವರದಿ ಮಾಡಿದೆ. ಬಹುತೇಕ 50 ವರ್ಷಗಳ ಬಳಿಕ ಮಾಡಲಾಗಿರುವ ಈ ಅತ್ಯಾಚಾರದ ಆರೋಪವು ಸಂಪೂರ್ಣವಾಗಿ ಸುಳ್ಳು ಹಾಗೂ ಸೃಷ್ಟಿಸಲ್ಪಟ್ಟದ್ದು ಎಂದು ರಿಜ್ವಾನ್ ಹೇಳಿದ್ದಾರೆ.
ಯಾವುದೇ ದೂರು, ದಾವೆ ಹೂಡುವುದಕ್ಕೆ ‘ಕಾಲ ಪರಿಮಿತಿ ಕಾಯಿದೆ’ ಯಲ್ಲಿ ನಿಯಮಗಳಿವೆ. ಗರಿಷ್ಠ ಮೂರು ವರ್ಷಗಳ ಕಾಲಾವಧಿ ಮೀರಿ ಮಾಡಲಾಗಿರುವ ಈ ದೂರು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದು ವಕೀಲ ರಿಜ್ವಾನ್ ಹೇಳಿದ್ದಾರೆ.
ಈ ರೀತಿ ದೂರು ನೀಡುವುದರ ದುರುದ್ದೇಶ ನನ್ನ ಕಕ್ಷಿದಾರನು ಸಮಾಜದಲ್ಲಿ ಹೊಂದಿರುವ ಘನತೆ, ಗೌರವಗಳಿಗೆ ಮಸಿ ಬಳಿಯುವುದು; ಆತನ ವ್ಯಾಪಾರ, ವಹಿವಾಟು, ಉದ್ಯಮಗಳಿಗೆ ಪೆಟ್ಟು ಕೊಡುವುದು; ಆತನ ಮಾನಾಪಹರಣ ಮಾಡುವುದೇ ಆಗಿದೆ ಎಂದು ವಕೀಲ ರಿಜ್ವಾನ್ ಹೇಳಿದ್ದಾರೆ.