ಫೇಸ್‌ಬುಕ್‌ ಫೇಸ್‌ ತಂದ ಅದೃಷ್ಟ!

ರತ್ನಮಂಜರಿಯಲ್ಲಿ ರಾಜ್‌ಯೋಗ

Team Udayavani, May 13, 2019, 3:00 AM IST

ಕೆಲವರು ಹೀರೋ ಆಗಬೇಕು ಅಂತ ಸಾಕಷ್ಟು ತಯಾರಿ ನಡೆಸುತ್ತಾರೆ, ಸಿಕ್ಕ ಸಿಕ್ಕ ಕಡೆ ಆಡಿಷನ್‌ಗೂ ಹೋಗುತ್ತಾರೆ. ಆದರೆ, ಹೀರೋ ಆಗುವ ಅದೃಷ್ಟ ಮಾತ್ರ ಅಷ್ಟಕ್ಕಷ್ಟೆ. ಇನ್ನೂ ಕೆಲವರಿಗೆ ಹೀರೋ ಆಗುವ ಅವಕಾಶ ಹುಡುಕಿಕೊಂಡೇ ಬಂದುಬಿಡುತ್ತೆ. ಆ ಸಾಲಿಗೆ ರಾಜ್‌ಚರಣ್‌ ಕೂಡ ಸೇರುತ್ತಾರೆ. ಯಾರು ಈ ರಾಜ್‌ಚರಣ್‌ ಎಂಬ ಪ್ರಶ್ನೆಗೆ “ರತ್ನಮಂಜರಿ’ ಚಿತ್ರ ತೋರಿಸಬೇಕು.

ಹೌದು, “ರತ್ನಮಂಜರಿ’ ಚಿತ್ರದ ಹೀರೋ ಈ ರಾಜ್‌ಚರಣ್‌. ಇವರಿಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಫೇಸ್‌ಬುಕ್‌ ಮೂಲಕ. ಇವರ ಫೇಸ್‌ಬುಕ್‌ ಪ್ರೊಫೈಲ್‌ ನೋಡಿದ ನಿರ್ದೇಶಕ ಪ್ರಸಿದ್ಧ್ ಅವರು ಡೆನ್ಮಾರ್ಕ್‌ನಿಂದಲೇ ಕಾಲ್‌ ಮಾಡಿ, “ಚಿತ್ರವೊಂದಕ್ಕೆ ಆಡಿಷನ್‌ ಇದೆ, ನೀವು ಬನ್ನಿ, ಆಯ್ಕೆಯಾದರೆ, ನೀವೇ ಹೀರೋ’ ಅಂದರಂತೆ.

ಆದರೆ, ರಾಜ್‌ಚರಣ್‌ಗೆ ಅದೇಕೋ ಅವರ ಮಾತು ಮೊದಲು ನಂಬಿಕೆ ಬರಲಿಲ್ಲವಂತೆ. ಇದೆಲ್ಲೋ ಫೇಕ್‌ ಇರಬೇಕು ಅಂತ ಸುಮ್ಮನಿದ್ದರಂತೆ. ನಾನು ಹೊಸಬ. ನನ್ನ ಫೇಸ್‌ಬುಕ್‌ ಫೇಸ್‌ ನೋಡಿ ಅವಕಾಶ ಎಲ್ಲಿಂದ ಬರಬೇಕು ಅಂತ ಯೋಚಿಸುತ್ತಲೇ ತಮ್ಮ ಪಾಡಿಗೆ ತಾವಿದ್ದರಂತೆ. ಕೊನೆಗೆ ನಿರ್ದೇಶಕ ಪ್ರಸಿದ್ಧ್ ಅವರು ಇಂಡಿಯಾಗೆ ಬಂದ ಕೂಡಲೇ ರಾಜ್‌ಚರಣ್‌ಗೆ ಕಾಲ್‌ ಮಾಡಿ, ಬನ್ನಿ ಅಂದಿದ್ದಾರೆ.

ಆಡಿಷನ್‌ ಕೂಡ ನಡೆಸಿದ್ದಾರೆ. ಆದರೆ, ರಾಜ್‌ಚರಣ್‌ಗೆ ಆಡಿಷನ್‌ ಪಾಸ್‌ ಆಯ್ತಾ ಇಲ್ಲವೋ ಎಂಬ ಗೊಂದಲವಿತ್ತಂತೆ. ಯಾಕೆಂದರೆ, ನಿರ್ದೇಶಕರು, ಎನ್‌ಆರ್‌ಐ ಕನ್ನಡಿಗರು ಸೇರಿ ಮಾಡುತ್ತಿರುವ ಚಿತ್ರವಿದು. ನಿನ್ನನ್ನು ಲಿಸ್ಟ್‌ನಲ್ಲಿ ಇಟ್ಟಿರ್ತೀನಿ. ಯುಎಸ್‌ನಲ್ಲೇ ಹೀರೋ ಹುಡುಕಾಟ ನಡೆಯುತ್ತಿದೆ. ಹಾಗೊಂದು ವೇಳೆ ಸಿಗದೇ ಇದ್ದರೆ ನೀನೇ ಹೀರೋ ಅಂದಿದ್ದರಂತೆ.

ಎರಡು ತಿಂಗಳ ಬಳಿಕ ಪ್ರಸಿದ್ಧ್ ಕಾಲ್‌ ಮಾಡಿ, ನೀನೇ ನಮ್ಮ ಚಿತ್ರಕ್ಕೆ ಹೀರೋ ಅಂದರಂತೆ. ಹಾಗೆ ನಡೆದ ಮಾತುಕತೆ, ಚಿತ್ರವಾಗಿ, ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಮೇ.17 ರಂದು “ರತ್ನಮಂಜರಿ’ ಬಿಡುಗಡೆಗೆ ಸಿದ್ಧವಾಗಿದೆ. ಆ ಕುರಿತು ರಾಜ್‌ಚರಣ್‌ ಹೇಳುವುದಿಷ್ಟು. “ನಾನು ನಾಗತಿಹಳ್ಳಿ ಚಂದ್ರಶೇಖರ್‌ ಅವರ “ಟೆಂಟ್‌ ಸಿನಿಮಾ’ ಶಾಲೆಯ ವಿದ್ಯಾರ್ಥಿ.

ಅಲ್ಲಿ ನಟನೆ ತರಬೇತಿ ಕಲಿತಿದ್ದೇನೆ. “ರತ್ಮಮಂಜರಿ’ ಚಿತ್ರಕ್ಕೆ ವರ್ಕ್‌ಶಾಪ್‌ ನಡೆಸಿದ್ದು, ನೃತ್ಯ ನಿರ್ದೇಶಕ ಮೋಹನ್‌ ಬಳಿಕ ಡ್ಯಾನ್ಸ್‌ ಕಲಿತರೆ, ವಿಕ್ರಮ್‌ ಮಾಸ್ಟರ್‌ ಬಳಿ ಸ್ಟಂಟ್ಸ್‌ ಕಲಿತಿದ್ದೇನೆ. ಇನ್ನು, ರಾಜು ವೈವಿಧ್ಯ ಅವರ ಬಳಿ ನಟನೆ ಬಗ್ಗೆ ಸಾಕಷ್ಟು ವಿಷಯ ತಿಳಿದುಕೊಂಡೆ. ಆ ನಂತರ ಕ್ಯಾಮೆರಾ ಮುಂದೆ ನಿಂತೆ. ಶೇ.60 ರಷ್ಟು ಕೂರ್ಗ್‌ ನಲ್ಲಿ ಚಿತ್ರೀಕರಣ ನಡೆಸಲಾಗಿದೆ.

ನಮ್ಮ ಚಿತ್ರದ ಚಿತ್ರೀಕರಣ ನಡೆದು ಒಂದು ವಾರದಲ್ಲೇ ಕೂರ್ಗ್‌ ಪ್ರಕೃತಿ ವಿಕೋಪದಿಂದ ಹಾಳಾಯಿತು. ಆ ಸುಂದರ ತಾಣ ನಮ್ಮ ಚಿತ್ರದಲ್ಲಿ ಸೆರೆಯಾಗಿದೆ. ಈಗ ಮೊದಲಿನಂತೆ ಆ ಸ್ಥಳವಿಲ್ಲ. ಇನ್ನು, ಇದೊಂದು ನೈಜ ಘಟನೆ ಆಧರಿತ ಚಿತ್ರ. ಅಮೆರಿಕದಲ್ಲಿ ನಡೆದ ಘಟನೆ ಇಟ್ಟುಕೊಂಡು ಚಿತ್ರ ಮಾಡಲಾಗಿದೆ. ನಾನು ಎನ್‌ಆರ್‌ಐ ಕನ್ನಡಿಗನ ಪಾತ್ರ ಮಾಡಿದ್ದೇನೆ.

ಇಲ್ಲೊಂದು ಲವ್‌ಸ್ಟೋರಿ ಇದೆ. ಇಂಡಿಯಾಗೆ ಅವನು ಯಾಕೆ ಬರುತ್ತಾನೆ ಎಂಬುದೇ ಕಥೆ. ಇದು ಮರ್ಡರ್‌ ಮಿಸ್ಟ್ರಿ ಹೊಂದಿದೆ. ಚಿತ್ರದಲ್ಲಿ ಅಖೀಲಾ ಪ್ರಕಾಶ್‌, ಶ್ರದ್ಧಾ ಸಾಲಿಯನ್‌, ಪಲ್ಲವಿರಾಜ್‌ ಮೂವರು ನಾಯಕಿಯರಿದ್ದಾರೆ.

“ರತ್ನಮಂಜರಿ’ ವಿಶೇಷವೆಂದರೆ, ಅಕ್ಕ ಸಮ್ಮೇಳನದಲ್ಲಿ ಆಡಿಯೋ ಬಿಡುಗಡೆಯಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಇದೆ’ ಎನ್ನುವ ರಾಜ್‌ಚರಣ್‌ಗೆ ಚಿತ್ರದ ಮೇಲೆ ಭರವಸೆ ಇದೆ. ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲದೊಂದಿಗೆ ಸದ್ಯ, ಮೂರು ಚಿತ್ರಗಳ ಮಾತುಕತೆಯಲ್ಲಿ ತೊಡಗಿದ್ದಾರಂತೆ. ಅತ್ತ ತೆಲುಗಿನಿಂದಲೂ ಅವಕಾಶ ಬಂದಿದೆ’ ಎನ್ನುತ್ತಾರೆ ಅವರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ