ಹಿಂದಿಗೆ ಕನ್ನಡ “ಮೈನಾ’

ನಾಗಶೇಖರ್‌ ನಿರ್ದೇಶನ

Team Udayavani, Jun 26, 2019, 3:00 AM IST

ಅಂಬರೀಶ್‌ ಪುತ್ರ ಅಭಿಷೇಕ್‌ ಅವರನ್ನು “ಅಮರ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ನಾಗಶೇಖರ್‌, ಆ ಚಿತ್ರದ ಬಳಿಕ ಯಾವ ಚಿತ್ರ ಕೈಗೆತ್ತಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ನಾಗಶೇಖರ್‌ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ. ಆದರೆ, ಈ ಬಾರಿ ಅವರು ಕನ್ನಡ ಚಿತ್ರ ಮಾಡುತ್ತಿಲ್ಲ.

ಅವರೀಗ ಬಾಲಿವುಡ್‌ ಅಂಗಳಕ್ಕೆ ಜಿಗಿಯುವ ಸಾಹಸ ಮಾಡಿದ್ದಾರೆ. ಹಿಂದಿಯಲ್ಲಿ ಸಿನಿಮಾ ನಿರ್ದೇಶಿಸುವ ಉತ್ಸಾಹ ಹೊಂದಿದ್ದಾರೆ. ಅಷ್ಟಕ್ಕೂ ನಾಗಶೇಖರ್‌ ಹಿಂದಿಯಲ್ಲಿ ನಿರ್ದೇಶನ ಮಾಡಲು ಹೊರಟಿರುವುದು ಈ ಹಿಂದೆ ಅವರೇ ನಿರ್ದೇಶಿಸಿದ್ದ “ಮೈನಾ’ ಚಿತ್ರವನ್ನು. ಇದೇ “ಮೈನಾ’ ಚಿತ್ರ ಹಿಂದಿಯಲ್ಲಿ ರೀಮೇಕ್‌ ಆಗುತ್ತಿದೆ.

ಅಂದಹಾಗೆ, ನಾಗಶೇಖರ್‌ ನಿರ್ದೇಶಿಸಲಿರುವ “ಮೈನಾ’ ಚಿತ್ರಕ್ಕೆ ಬಾಲಿವುಡ್‌ ನಿರ್ಮಾಪಕರೊಬ್ಬರ ಪುತ್ರ ಹೀರೋ ಆಗುತ್ತಿದ್ದಾರೆ. ಅಲ್ಲಿನ ಜೋಗಿಂದರ್‌ ಸಿಂಗ್‌ ಅವರ ಪುತ್ರ ಭವೀಶ್‌ “ಮೈನಾ’ ರೀಮೇಕ್‌ಗೆ ಹೀರೋ ಆಗುತ್ತಿದ್ದಾರೆ. 2013 ರಲ್ಲಿ ತೆರೆಗೆ ಬಂದ “ಮೈನಾ’ ಸೂಪರ್‌ ಹಿಟ್‌ ಆಗಿತ್ತು.

“ಆ ದಿನಗಳು’ ಖ್ಯಾತಿಯ ಚೇತನ್‌ ಹಾಗೂ ನಿತ್ಯಾ ಮೆನನ್‌ ಕಾಂಬಿನೇಷನ್‌ನಲ್ಲಿ ಆ ಚಿತ್ರ ಮೂಡಿಬಂದಿತ್ತು. ಈಗ ಬಾಲಿವುಡ್‌ನ‌ಲ್ಲೂ “ಮೈನಾ’ ರೀಮೇಕ್‌ ಆಗುತ್ತಿರುವುದು ಹೊಸ ಬೆಳವಣಿಗೆಯೂ ಹೌದು. ಸದ್ಯಕ್ಕೆ ಹಿಂದಿಯಲ್ಲಿ ತಯಾರಾಗುತ್ತಿರುವ “ಮೈನಾ’ ರೀಮೇಕ್‌ನಲ್ಲಿ ನಾಯಕಿ ಯಾರಾಗಲಿದ್ದಾರೆ ಎಂಬುದಕ್ಕೆ ಉತ್ತರವಿಲ್ಲ.

ಆದರೆ, ನಿರ್ದೇಶಕ ನಾಗಶೇಖರ್‌ ಅವರು, ತಾನ್ಯಾಹೋಪ್‌ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆಯಂತೆ. ಆದರೆ, ತಾನ್ಯಾಹೋಪ್‌ ಜೊತೆ ಈ ಕುರಿತು ಇನ್ನಷ್ಟೇ ನಿರ್ದೇಶಕರು ಮಾತನಾಡಬೇಕಿದೆ. ಆ ಬಳಿಕ ನಾಯಕಿ ಯಾರೆಂಬುದು ಗೊತ್ತಾಗಲಿದೆ.

ಇನ್ನು, ಹಿಂದಿಯಲ್ಲಿ ನಿರ್ದೇಶಿಸುತ್ತಿರುವ ನಾಗಶೇಖರ್‌ ಚಿತ್ರಕ್ಕೆ ಗಾಯಕ ಅರ್ಮಾನ್‌ ಮಲ್ಲಿಕ್‌ ಅವರು ಸಂಗೀತ ನೀಡಲಿದ್ದಾರೆ ಎನ್ನಲಾಗಿದೆ. ಈ ಹಿಂದಿ ಚಿತ್ರದ ಮೂಲಕ ಕನ್ನಡದ ಯಶಸ್ವಿ ಛಾಯಾಗ್ರಾಹಕ ಸತ್ಯ ಹೆಗಡೆ ಅವರು ಸಹ ಬಾಲಿವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ.

ಒಂದು ಮೂಲದ ಪ್ರಕಾರ ಬಿಪಾಶ ಬಸು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಎಲ್ಲವೂ ಮಾತುಕತೆ ಹಂತದಲ್ಲಿವೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಸರಿಯಾಗಿ ನಡೆದರೆ, ಜುಲೈ 1 ರಂದು ಹಿಂದಿ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ