‘ಸಪ್ಲೈಯರ್ ಶಂಕರ’ನ ನೋವು-ನಲಿವು; ನಿಶ್ಚಿತ್ ಕೊರೋಡಿ ಹೀರೋ
Team Udayavani, Jun 14, 2023, 4:03 PM IST
“ಸಪ್ಲೈಯರ್ ಶಂಕರ್’- ಹೀಗೊಂದು ಸಿನಿಮಾ ಸದ್ದಿಲ್ಲದೇ ತಯಾರಾಗುತ್ತಿದೆ. ಈ ಹಿಂದೆ ಗಂಟುಮೂಟೆ, ಟಾಮ್ ಅಂಡ್ ಜೆರ್ರಿ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ನಾಯಕ ನಿಶ್ಚಿತ್ ಕೊರೋಡಿ ಈ ಸಿನಿಮಾದ ಹೀರೋ. ಯುವ ಪ್ರತಿಭೆ ರಂಜಿತ್ ಸಿಂಗ್ ರಜಪೂತ್ ಈ ಚಿತ್ರದ ನಿರ್ದೇಶಕರು. ತ್ರಿನೇತ್ರ ಫಿಲಂಸ್ ಸಂಸ್ಥೆಯಡಿ ಎಂ.ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ ಈ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬಿಝಿಯಾಗಿದೆ.
ಚಿತ್ರದ ಟೈಟಲ್ ಹೇಳುವಂತೆ ಒಬ್ಬ ಬಾರ್ ಸಪ್ಲೈಯರ್ ಸುತ್ತ ಇಡೀ ಸಿನಿಮಾ ಸಾಗುತ್ತದೆ. ನಿಶ್ಚಿತ್ಗೆ ಜೋಡಿಯಾಗಿ ಲಗೋರಿ ಸಿನಿಮಾ ಖ್ಯಾತಿಯ ದೀಪಿಕಾ ಆರಾಧ್ಯ ನಟಿಸಿದ್ದು, ಗೋಪಾಲ ಕೃಷ್ಣ ದೇಶಪಾಂಡೇ, ಜ್ಯೋತಿ ರೈ, ನವೀನ್ ಡಿ ಪಡಿಲ್ ಸೇರಿದಂತೆ ಒಂದಷ್ಟು ಹೊಸಬರು ಚಿತ್ರದಲ್ಲಿದ್ದಾರೆ.
ವಿಜಯ್ ಪ್ರಕಾಶ್, ಸುನಿಲ್ ಕಶ್ಯಪ್, ಮೋಹನ್ ಬಿನ್ನಿಪೇಟೆ, ಸಂತೋಷ್ ವೆಂಕಿ, ನಕುಲ್ ಅಭಯ್ಯಂಕರ್, ಐಶ್ವರ್ಯ ರಂಗರಾಜನ್ ಹಾಡುಗಳಿಗೆ ಧ್ವನಿಯಾಗಿದ್ದು, ರವಿ ಬಸ್ರೂರ್ ಬಳಿ ಕೆಲಸ ಮಾಡಿರುವ ಆರ್.ಬಿ.ಭರತ್ ಸಂಗೀತ ನೀಡಿದ್ದಾರೆ. ಸತೀಶ್ ಚಂದ್ರಯ್ಯ ಸಂಕಲನ, ಸತೀಶ್ ಕುಮಾರ್.ಎ ಛಾಯಾಗ್ರಹಣ, ಬಾಲಾಜಿ ಕಲಾ ನಿರ್ದೇಶನ ಸಿನಿಮಾಕ್ಕಿದೆ.