“ಅಮರ್’ ಟ್ರೇಲರ್ ಬಂತು
Team Udayavani, Mar 2, 2019, 5:19 AM IST
ರೆಬೆಲ್ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಚಿತ್ರ “ಅಮರ್’ ಟ್ರೇಲರ್ ಬಿಡುಗಡೆಯಾಗಿದೆ. ಇನ್ನೊಂದು ವಿಶೇಷವೆಂದರೆ, ನಿನ್ನೆ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಯಜಮಾನ’ ಚಿತ್ರ ಜೊತೆಯಲ್ಲೇ “ಅಮರ್’ ಚಿತ್ರದ ಟ್ರೇಲರ್ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಟ್ರೇಲರ್ನ ಆರಂಭದಲ್ಲಿ, ಅಭಿಷೇಕ್, ಅಂಬರೀಷ್ ಆಶೀರ್ವಾದ ಪಡೆದು ಆ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಹೃದಯಪೂರ್ವಕ ಧನ್ಯವಾದ ಹೇಳಿದ್ದಾರೆ.
ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ನಲ್ಲಿ ಅಂಬರೀಶ್ ಸ್ಟೈಲ್ನಲ್ಲೇ, “ಹೀರೋ ತರನಾ… ನೋ ವೇ… ಹೀರೋನೇ’ ಡೈಲಾಗ್ ಹೊಡೆಯುವ ಮೂಲಕ ಎಲ್ಲರ ಗಮನ ಸೆಳೆದು, ರೆಬೆಲ್ ಬಾಯ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದ ಅಭಿಷೇಕ್, ಈಗ ಟ್ರೇಲರ್ನಲ್ಲಿ “ನೀನು 6 ದಿನ ಬದುಕಿರು 6 ವಾರ ಬದುಕಿರು ಅಥವಾ 6 ತಿಂಗಳು ಬದುಕಿರು 6 ವರ್ಷ ಬದುಕಿರು ಯು ವಿಲ್ ಬಿ ದ ಒನ್ಲಿ ಗರ್ಲ್ ಇನ್ ಮೈ ಲೈಫ್ ಐ ಲವ್ ಯೂ’ ಎಂದು ಡೈಲಾಗ್ ಹೊಡೆಯುವ ಮೂಲಕ ಲವರ್ ಬಾಯ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೀತಿ, ಪ್ರೇಮದ ಬಲೆಯಲ್ಲಿ ಸಿಲುಕಿ ನಾಯಕಿ ಹಿಂದೆ ಅಲೆದಾಟ ನಡೆಸಿದ್ದಾರೆ. ನಾಗಶೇಖರ್ ನಿರ್ದೇಶನದ ಈ ಸಿನಿಮಾವನ್ನು ಸಂದೇಶ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಿದ್ದು, ಸತ್ಯ ಹೆಗ್ಡೆ ಅಮರ್ ಚಿತ್ರದ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಚಿತ್ರದ ಟ್ರೇಲರ್ನಲ್ಲಿ ಚಿತ್ರದ ಅದ್ಧೂರಿ ಮೇಕಿಂಗ್ ಗಮನ ಸೆಳೆಯುತ್ತಿದ್ದು, ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.