“ಚಿತ್ರಬ್ರಹ್ಮ’ನ ನೆನಪಿನಲ್ಲಿ ಸಂಗೀತ ಸಂಜೆ

Team Udayavani, May 16, 2019, 3:00 AM IST

ಕನ್ನಡ ಚಿತ್ರರಂಗದ “ಚಿತ್ರಬ್ರಹ್ಮ’ ಖ್ಯಾತಿಯ ಹಿರಿಯ ನಿರ್ದೇಶಕ ದಿ. ಎಸ್‌.ಆರ್‌ ಪುಟ್ಟಣ್ಣ ಕಣಗಾಲ್‌ ಅವರ ಹೆಸರು, ಅವರ ಚಿತ್ರಗಳು ಇಂದಿಗೂ ಕನ್ನಡ ಚಿತ್ರರಂಗದಲ್ಲಿ, ಸಿನಿಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಇನ್ನು ಪುಟ್ಟಣ್ಣ ಕಣಗಾಲರ ಚಿತ್ರದ ಹಾಡುಗಳಂತೂ ಎವರ್‌ಗ್ರೀನ್‌ ಎನ್ನುವಂತೆ, ಕೇಳುಗರ ಬಾಯಲ್ಲಿ ಯಾವಾಗಲೂ ಗುನುಗುತ್ತಿರುತ್ತವೆ.

ಈಗ ಮತ್ತೂಮ್ಮೆ ಪುಟ್ಟಣ್ಣ ಕಣಗಾರ ಚಿತ್ರಗಳು ಮತ್ತು ಅವರ ಚಿತ್ರಗಳ ಹಾಡುಗಳನ್ನು ಮೆಲುಕು ಹಾಕುವಂಥ ಕಾರ್ಯಕ್ರಮವೊಂದು ಈ ವಾರಾಂತ್ಯದಲ್ಲಿ ಆಯೋಜನೆಯಾಗಿದೆ. ಇದೇ ಮೇ 18ರ ಭಾನುವಾರ, ಸಂಜೆ 6ಗಂಟೆಯಿಂದ ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಪ್ರೇಮಚಂದ್ರಸಾಗರ್‌ ಆಡಿಟೋರಿಯಂನಲ್ಲಿ “ಮೂಕ ಹಕ್ಕಿಯು ಹಾಡುತಿದೆ’ ಎಂಬ ಹೆಸರಿನಲ್ಲಿ ಪುಟ್ಟಣ್ಣ ಕಣಗಾಲರ ಚಿತ್ರಗಳ ಗೀತಗಾಯನ ಕಾರ್ಯಕ್ರಮ ನಡೆಯುತ್ತಿದ್ದು,

ಈ ಕಾರ್ಯಕ್ರಮದಲ್ಲಿ, ಪುಟ್ಟಣ್ಣ ಕಣಗಾಲರ ಜೊತೆ ಕೆಲಸ ಮಾಡಿದ ಅನೇಕ ಕಲಾವಿದರು, ತಂತ್ರಜ್ಞರು, ಸಹವರ್ತಿಗಳು, ಕುಟುಂಬ ಸದಸ್ಯರು, ಅವರ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಹಿರಿಯ ನಟ ಶ್ರೀನಾಥ್‌, ಜಯಂತಿ, ರಾಮಕೃಷ್ಣ, ಶಿವರಾಂ, ಜೈಜಗದೀಶ್‌, ಪದ್ಮವಾಸಂತಿ, ಅಪರ್ಣ, ನಿರ್ದೇಶಕ ಪಿ.ಹೆಚ್‌ ವಿಶ್ವನಾಥ್‌ ಮೊದಲಾದವರನ್ನು ಗೌರಸಲಾಗುತ್ತಿದೆ.

“ಮೂಕ ಹಕ್ಕಿಯು ಹಾಡುತಿದೆ’ ಸಂಗೀತ ಸಂಜೆ ಕಾರ್ಯಕ್ರಮ ವೆಂಕಟೇಶ್‌ ಮತ್ತು ದಿವ್ಯಶ್ರೀ ವೆಂಕಟೇಶ್‌ ಸಾರಥ್ಯದಲ್ಲಿ ನಡೆಯುತ್ತಿದ್ದು, ಇದರಲ್ಲಿ ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಜನಪ್ರಿಯ ಚಿತ್ರಗಳ ಸುಮಾರು ಐವತ್ತು ಗೀತೆಗಳನ್ನು ಸಿಂಚನ್‌ ದೀಕ್ಷಿತ್‌, ದಿವ್ಯಶ್ರೀ ವೆಂಕಟೇಶ್‌, ಕುಮಾರನ್‌ ಮುತ್ತುರಾಮನ್‌, ಮೇಘನಾ ಭಟ್‌, ಗೋವಿಂದ್‌ ಕರ್ನೂಲ್‌ ಸೇರಿದಂತೆ ಹಲವು ಗಾಯಗರು ವೇದಿಕೆಯಲ್ಲಿ ಪ್ರಸ್ತುತಪಡಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕ ಕರಿಸುಬ್ಬು ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ 250 ರೂ ಪ್ರವೇಶ ದರವಿದ್ದು, ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ಹಣವನ್ನು ನಿರಾಶ್ರಿತ ಮಕ್ಕಳು, ಮಹಿಳೆಯರು ಹಾಗೂ ಗೋ ಸಂರಕ್ಷಣಾ ಕೇಂದ್ರಗಳಿಗೆ ನೆರವು ನೀಡಲು ಬಳಸಿಕೊಳ್ಳಲು ಆಯೋಜಕರು ನಿರ್ಧರಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ