ಅಂತಿಮ ಹಂತಕ್ಕೆ “ಶಿವಾಜಿ ಸುರತ್ಕಲ್‌’

Team Udayavani, May 15, 2019, 3:00 AM IST

ನಟ ರಮೇಶ್‌ ಅರವಿಂದ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ “ಶಿವಾಜಿ ಸುರತ್ಕಲ್‌’ ಚಿತ್ರದ ಚಿತ್ರೀಕರಣ ಅಂತಿಮ ಘಟ್ಟಕ್ಕೆ ತಲುಪಿದೆ. ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಪೊಲೀಸ್‌ ಇಲಾಖೆಯ ಕ್ರೈಂ ಬ್ರ್ಯಾಂಚ್‌ನಲ್ಲಿ ಪತ್ತೇಧಾರಿ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ರಮೇಶ್‌ ಅರವಿಂದ್‌ ಗೆಟಪ್‌ ನೋಡುಗರ ಗಮನ ಸೆಳೆಯುವಂತಿವೆ.

ಈ ಹಿಂದೆ “ಬದ್ಮಾಶ್‌’, “ಸುಳ್ಳೇ ಸತ್ಯ’ ಚಿತ್ರಗಳನ್ನು ನಿರ್ದೇಶಿಸಿದ್ದ ಆಕಾಶ್‌ ಶ್ರೀವತ್ಸ “ಶಿವಾಜಿ ಸುರತ್ಕಲ್‌’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. “ಅಂಜನಾದ್ರಿ ಸಿನಿ ಕ್ರಿಯೇಶನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ರೇಖಾ.ಕೆ.ಎನ್‌, ಅನೂಪ್‌ ಗೌಡ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇನ್ನು “ಶಿವಾಜಿ ಸುರತ್ಕಲ್‌’ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅವರ ಪಾತ್ರಕ್ಕೆ ಎರಡು ಗೆಟಪ್‌ ಇದೆಯಂತೆ.

ಇದೇ ಮೊದಲ ಬಾರಿಗೆ ರಮೇಶ್‌ ಚಿತ್ರದ ಪಾತ್ರಕ್ಕಾಗಿ ಸುಮಾರು ನಾಲ್ಕು ತಿಂಗಳ ಕಾಲ ಶೇವ್‌ ಮಾಡಿರಲಿಲ್ಲವಂತೆ! ಈ ಬಗ್ಗೆ ಮಾತನಾಡುವ ನಿರ್ದೇಶಕ ಆಕಾಶ್‌ ಶ್ರೀವತ್ಸ, “ಚಿತ್ರದಲ್ಲಿ ಒಂದು ವರ್ತಮಾನದಲ್ಲಿ ಮತ್ತೊಂದು ಭೂತಕಾಲದಲ್ಲಿ ಕಥೆ ನಡೆಯಲಿದ್ದು, ಈ ಎರಡೂ ಕಾಲದ ನಡುವೆ ಶಿವಾಜಿ ಪಾತ್ರ ಹರಿದಾಡುವುದರಿಂದ, ಪ್ರೇಕ್ಷಕರಿಗೆ ಗೊಂದಲವಾಗಬಾರದು ಎಂಬ ಕಾರಣಕ್ಕೆ ರಮೇಶ್‌ ಅರವಿಂದ್‌ ಅವರಿಗೆ ಇಂಥದ್ದೊಂದು ಗೆಟಪ್‌ ನೀಡಲಾಗಿದೆ’ ಎನ್ನುತ್ತಾರೆ.

“ಶಿವಾಜಿ ಸುರತ್ಕಲ್‌’ ಚಿತ್ರದಲ್ಲಿ ಚಿತ್ರದ ಕಥಾನಾಯಕ ರಣಗಿರಿ ರಹಸ್ಯ ಎಂಬ ಕೇಸ್‌ ಅನ್ನು ಭೇದಿಸಲಿದ್ದು ಚಿತ್ರದ ಟೈಟಲ್‌ಗೆ “ದಿ ಕೇಸ್‌ ಆಫ್ ರಣಗಿರಿ ರಹಸ್ಯ’ ಎಂದು ಟ್ಯಾಗ್‌ ಲೈನ್‌ ಕೊಡಲಾಗಿದೆ. “ಶಿವಾಜಿ ಸುರತ್ಕಲ್‌’ ಚಿತ್ರದ ಹಾಡುಗಳಿಗೆ ಜೂಡಾ ಸ್ಯಾಂಡಿ ಸಂಗೀತ, ಜಯಂತ ಕಾಯ್ಕಿಣಿ ಸಾಹಿತ್ಯವಿದೆ. ಚಿತ್ರಕ್ಕೆ ಗುರುಪ್ರಸಾದ್‌ ಎಂ.ಜಿ ಛಾಯಾಗ್ರಹಣ, ಶ್ರೀಕಾಂತ್‌ ಸಂಕಲನ ಕಾರ್ಯವಿದೆ.

“ಶಿವಾಜಿ ಸುರತ್ಕಲ್‌’ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅವರೊಂದಿಗೆ, ರಾಧಿಕಾ ನಾರಾಯಣ್‌ ಲಾಯರ್‌ ಪಾತ್ರದಲ್ಲಿ, ಆರೋಹಿ ನಾರಾಯಣ್‌ ಮನೋ ವೈದ್ಯೆಯಾಗಿ, ನಟ ರಾಘವೇಂದ್ರ ಶಿವಾಜಿ ಸಹಾಯಕನಾಗಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮಡಿಕೇರಿ ಸುತ್ತಮುತ್ತ ಶೇಕಡಾ 80ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಬಾಕಿಯಿರುವ ಕೊನೆ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸಲು ಪ್ಲಾನ್‌ ಹಾಕಿಕೊಂಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ