ವಿಚಾರಣೆಗೆ ಹಾಜರಾಗದ ನಟಿ ಕಂಗನಾ ವಿರುದ್ಧ ವಾರೆಂಟ್ !
Team Udayavani, Mar 1, 2021, 9:05 PM IST
ಮುಂಬೈ : ಗೀತ ರಚನಕಾರ ಜಾವೇದ್ ಅಖ್ತರ್ ಹೂಡಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಬಾಲಿವುಡ್ ನಟಿ ಕಂಗನಾ ವಿರುದ್ಧ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಇಂದು (ಮಾರ್ಚ್1) ವಾರೆಂಟ್ ಹೊರಡಿಸಿದೆ.
ನಟಿ ಕಂಗನಾ ರನೌತ್ ಟಿವಿ ಕಾರ್ಯಕ್ರಮವೊಂದರಲ್ಲಿ ಜಾವೇದ್ ಅಖ್ತರ್ ವಿರುದ್ಧ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಕಂಗನಾ ವಿರುದ್ಧ ಜಾವೇದ್ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಗೆ ಮಾರ್ಚ್ 1 ರಂದು ಹಾಜರಾಗುವಂತೆ ಕಂಗನಾ ಅವರಿಗೆ ಫೆ.1ರಂದು ನ್ಯಾಯಾಲಯ ಸಮನ್ಸ್ ನೀಡಿತ್ತು. ಆದರೆ, ನಟಿ ವಿಚಾರಣೆಗೆ ಗೈರಾಗಿದ್ದಾರೆ. ಇದರಿಂದ ನ್ಯಾಯಾಲಯದಿಂದ ಕಂಗನಾ ವಿರುದ್ಧ ವಾರೆಂಟ್ ಜಾರಿಯಾಗಿದೆ. ಜತೆಗೆ ವಿಚಾರಣೆಯನ್ನು ಮಾರ್ಚ್ 22 ಕ್ಕೆ ಮುಂದೂಡಲಾಗಿದೆ.
ಇನ್ನು ಜೂನ್‌ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಕುರಿತು ಮಾತನಾಡಿದ್ದ ಕಂಗನಾ, ಜಾವೇದ್ ಅಖ್ತರ್ ಹೆಸರು ಪ್ರಸ್ತಾಪಿಸಿದ್ದರು. ನಟ ಹೃತಿಕ್ ರೋಷನ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಬೇಡಿ ಎಂದು ಅಖ್ತರ್ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪ ತಳ್ಳಿ ಹಾಕಿರುವ ಜಾವೇದ್, ನನ್ನ ಮಾನ ಹರಾಜು ಹಾಕುತ್ತಿದ್ದಾರೆ ಎಂದು ಕಂಗನಾ ವಿರುದ್ಧ ದೂರು ದಾಖಲಿಸಿದ್ದರು. ಇದರ ವಿಚಾರಣೆ ಇಂದು ನಡೆಯಬೇಕಿತ್ತು. ಆದರೆ, ಕಂಗನಾ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಮಾರ್ಚ್ 22 ಕ್ಕೆ ಮುಂದೂಡಲಾಗಿದೆ.