ಹೆರಕಲ್ ಯೋಜನೆ; ಹಳ್ಳ ಹಿಡಿದದ್ದು ಹೇಗೆ?

Team Udayavani, May 16, 2019, 2:26 PM IST

ಬಾಗಲಕೋಟೆ: ನಗರದ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ, ಹಳ್ಳ ಹಿಡಿಯಲು ನಾನು ಕಾರಣವಲ್ಲ ಅವರು ಎಂದು ಒಬ್ಬ ಇಂಜನಿಯರ್‌ ಹೇಳಿದರೆ, ಇಲ್ಲಾರಿ, ಅವರಿಂದಾನೇ ಯೋಜನೆ ಇಷ್ಟು ವಿಳಂಬವಾಯ್ತು ಎಂದು ಮತ್ತೂಬ್ಬ ಇಂಜಿನಿಯರ್‌ ಹೇಳುತ್ತಿದ್ದು, ಹೆರಕಲ್ ಯೋಜನೆ ಕುರಿತು ಬಿಟಿಡಿಎ ಇಂಜಿನಿಯರ್‌ಗಳಲ್ಲೇ ಪರಸ್ಪರ ತೀವ್ರ ಅಸಮಾಧಾನ, ಅಪಸ್ವರದ ಮಾತು ಕೇಳಿ ಬರುತ್ತಿವೆ.

ನಿಜ, ಹೆರಕಲ್ದಿಂದ ಬಾಗಲಕೋಟೆಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯ 72 ಕೋಟಿ ಮೊತ್ತದ ಕ್ರಿಯಾ ಯೋಜನೆ ರೂಪಿಸಿದ್ದು ಬಿಟಿಡಿಎ ಎಇಇ ಮೋಹನ ಹಲಗತ್ತಿ. ಆ ಯೋಜನೆಗೆ ಮಂಜೂರಾತಿ ದೊರೆತು, ಕಾಮಗಾರಿಗೆ ಟೆಂಡರ್‌ ಆಗುವ ಹೊತ್ತಿಗೆ ರಾಜ್ಯದಲ್ಲಿ ಸರ್ಕಾರ ಬದಲಾಗಿತ್ತು. ಸ್ಥಳೀಯ ಶಾಸಕರೂ ಬದಲಾಗಿದ್ದರು. ಆಗ ಸ್ಥಳೀಯ ಶಾಸಕರ ಅಕ್ಕ-ಪಕ್ಕದಲ್ಲಿ ಕಾಣಿಸಿಕೊಂಡ ಎಸ್‌.ಐ. ಇದ್ದಲಗಿ ಅವರು, ಇದೇ ಯೋಜನೆ ಪೂರ್ಣಗೊಳಿಸಲು 75 ಕೋಟಿ ಮೊತ್ತದ ಸೇತುವೆಯ ಪ್ರಸ್ತಾವನೆ ಸಿದ್ಧಪಡಿಸಿದರು. ಅದಕ್ಕೆ ಅನುಮೋದನೆ ಸಿಗಲಿಲ್ಲ. ಸೇತುವೆ ಸಿದ್ಧವಾಗಲಿಲ್ಲ. ಪೈಪ್‌ ಅಳವಡಿಸಲಿಲ್ಲ. ಹೀಗಾಗಿ ನೀರು ಬರಲಿಲ್ಲ ಎಂದು ಬಿಟಿಡಿಎನ ಕೆಲ ಅಧಿಕಾರಿಗಳೇ ಹೇಳಿಕೊಳ್ಳುತ್ತಿದ್ದಾರೆ.

ಕುಡಿಯುವ ನೀರು ಕೃಷಿಗೆ ದಾನ ?: ಮೂರು ಬಾರಿ ನೀಲನಕ್ಷೆ ಬದಲಾಗಿ, ಹಲವು ಗೊಂದಲಗಳು ನಿವಾರಣೆಯಾಗಿ, ಕೊನೆಗೆ ಕುಡಿಯುವ ನೀರು ಪೂರೈಕೆ ಯೋಜನೆಯೊಂದನ್ನು ಬ್ಯಾರೇಜ್‌ ತುಂಬುವ ಯೋಜನೆಯಾಗಿ ಮಾರ್ಪಡಿಸಿದ ಖ್ಯಾತಿ ಹೊಂದಿದ ಬಿಟಿಡಿಎ, ಕುಡಿಯುವ ನೀರನ್ನು ಕೃಷಿಗೆ ಕೊಡಲು ಮುಂದಾಗಿದೆ ಎಂಬ ಮಾತು ಈಗ ಬಲವಾಗಿ ಕೇಳಿ ಬರುತ್ತಿದೆ.

ಆನದಿನ್ನಿ ಬ್ಯಾರೇಜ್‌, ಘಟಪ್ರಭಾ ನದಿ ಪಾತ್ರದಲ್ಲಿದ್ದು, 0.108 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆಲಮಟ್ಟಿ ಜಲಾಶಯದ ಹಿನ್ನೀರು ಸರಿದಾಗ, ಈ ಬ್ಯಾರೇಜ್‌ ಬರಿದಾಗುತ್ತ ಬರುತ್ತದೆ. ಆಗ, ಹೆರಕಲ್ ಬ್ಯಾರೇಜ್‌ನಿಂದ ನೀರು ಪಂಪ್‌ ಮಾಡಿ, ಅಲ್ಲಿಂದ ಅಂದು ಆನದಿನ್ನಿ ಬ್ಯಾರೇಜ್‌ ತುಂಬಿಸಿಕೊಂಡು, ಬಾಗಲಕೋಟೆಗೆ ನೀರು ಕೊಡಲು ಬಿಟಿಡಿಎ ಸಿದ್ಧತೆ ಮಾಡಿಕೊಂಡಿದೆ. ಆದರೆ, ಆನದಿನ್ನಿ ಬ್ಯಾರೇಜ್‌ ಪ್ರತಿವರ್ಷ ಅವಧಿಗೆ ಮುನ್ನವೇ ಬರಿದಾಗಲು, ಕುಡಿಯುವ ಉದ್ದೇಶದಿಂದ ಕಟ್ಟಿದ ಬ್ಯಾರೇಜ್‌ ನೀರು ಕೃಷಿ ಬಳಕೆಯಾಗುತ್ತಿರುವುದರಿಂದ ಎಂಬುದು ಎಲ್ಲರಿಗೂ ಗೊತ್ತು. ಆನದಿನ್ನಿ ಬ್ಯಾರೇಜ್‌ ಖಾಲಿಯಾದಾಗ, ನೀರು ಬಿಡಿಸಬೇಕೆಂಬ ಒತ್ತಡ ಹೆಚ್ಚುತ್ತದೆ. ಮುಂದಿನ ವರ್ಷದಿಂದ ಹೆರಕಲ್ದಿಂದಲೇ ಆನದಿನ್ನಿ ಬ್ಯಾರೇಜ್‌ ತುಂಬಿಸಿಕೊಂಡರೆ, ಆನದಿನ್ನಿ ಬ್ಯಾರೇಜ್‌ ಸುತ್ತಲಿನ ಕೃಷಿ ಪಂಪಸೆಟ್‌ಗಳ ಸಂಖ್ಯೆಯೂ ಹೆಚ್ಚುತ್ತವೆ. ಕುಡಿಯುವ ನೀರಿಗಿಂತ, ಇತರೇ ಚಟುವಟಿಕೆಗೆ ನೀರು ಹೆಚ್ಚು ಬಳಕೆಯಾಗುತ್ತದೆ. ಆಗ ಮತ್ತೆ ಘಟಪ್ರಭಾ ನದಿ ಮೂಲಕ ನೀರು ಬಿಡಿ ಎಂದು ಕೇಳುವ ಸಂಪ್ರದಾಯ ತಪ್ಪಲ್ಲ ಎಂಬ ಮಾತು ಬಿಟಿಡಿಎ ಅಧಿಕಾರಿಗಳ ಮಟ್ಟದಲ್ಲಿ ವ್ಯಕ್ತವಾಗುತ್ತಿವೆ.

ಧೈರ್ಯ ಯಾರಿಗೂ ಇಲ್ಲ: ಕುಡಿಯುವ ಉದ್ದೇಶಕ್ಕೆ ಮೀಸಲಿಟ್ಟ ನೀರನ್ನು, ಇತರೆ ಚಟುವಟಿಕೆಗೆ ಬಳಸಬೇಡಿ ಎಂದು ಹೇಳಿಕೆ ಕೊಡುವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಿ ಸಾಕಷ್ಟು ಜನರಿದ್ದಾರೆ. ಆದರೆ, ಆ ಕಾರ್ಯ ನಿರಂತರ ನಡೆದರೂ ಅದಕ್ಕೆ ಬ್ರೇಕ್‌ ಹಾಕಿ, ಜನ-ಜಾನುವಾರುಗಳಿಗೆ ಕುಡಿಯುವ ನೀರು ಕೊಡುವ ಧೈರ್ಯ ಯಾರಿಗೂ ಇಲ್ಲ. ಕಾರಣ, ರೈತರ ವಿಷಯದಲ್ಲಿ ಕಠೊರ ನಿರ್ಧಾರ ಕೈಗೊಳ್ಳುವುದು ಸಾಧ್ಯವೂ ಇಲ್ಲ. ಬರದಿಂದ ನಲುಗಿದ ರೈತ, ಸ್ವಾಭಾವಿಕವಾಗಿ ನದಿ ಮತ್ತು ಬ್ಯಾರೇಜ್‌ಗಳಿಗೆ ಪಂಪಸೆಟ್ ಅಳವಡಿಸಿ, ನೀರು ಎತ್ತುವುದು ಸಾಮಾನ್ಯ. ಅದನ್ನು ತಡೆದರೆ, ದೊಡ್ಡ ಪ್ರತಿಭಟನೆಗಳೇ ಆಗುತ್ತವೆ. ಹೀಗಾಗಿ ಬ್ಯಾರೇಜ್‌ನಿಂದ, ಮತ್ತೂಂದು ಬ್ಯಾರೇಜ್‌ ತುಂಬಿಸಿಕೊಳ್ಳುವ ಬದಲು, ನೇರವಾಗಿ ಜಲ ಶುದ್ದೀಕರಣ ಘಟಕಕ್ಕೆ ನೀರು ಪಂಪ್‌ ಮಾಡಿದರೆ, ಶಾಶ್ವತ ಪರಿಹಾರವಾದೀತು ಎಂಬುದು ಹಲವರ ಅಭಿಪ್ರಾಯ. ಆದರೆ, ಈಗ ಬಹುತೇಕ ಗೊಂದಲದಲ್ಲೇ ಮುಗಿದ ಯೋಜನೆಗೆ ಪುನಃ 75 ಕೋಟಿ ಖರ್ಚು ಮಾಡಿ, ಸೇತುವೆ ನಿರ್ಮಿಸುವುದೂ ಕಷ್ಟ ಸಾಧ್ಯ. ಹೀಗಾಗಿ ಯೋಜನೆಯನ್ನೇ ಇಂತಹ ಅಧಿಕಾರಿಯೇ ಹಳ್ಳ ಹಿಡಿಸಿದರು ಎಂಬ ಪರಸ್ಪರ ಆರೋಪವನ್ನು ಬಿಟಿಡಿಎ ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರೆ.

ಒಟ್ಟಾರೆ, ಬಿಟಿಡಿಎ ಇಂಜಿನಿಯರ್‌ಗಳ ಮುಂದಾಲೋಚನೆ ಇಲ್ಲದ ಕಾರ್ಯಕ್ಕೆ, 72 ಕೋಟಿ ವೆಚ್ಚದ ಯೋಜನೆ ಆರು ವರ್ಷ ಕಳೆದರೂ ಸಮರ್ಪಕವಾಗಿ ಪೂರ್ಣಗೊಂಡಿಲ್ಲ. ಕುಡಿಯುವ ನೀರಿನ ಯೋಜನೆಯನ್ನು ಬ್ಯಾರೇಜ್‌ ತುಂಬುವ ಯೋಜನೆಯಾಗಿ ಮಾಡಿಟ್ಟಿದ್ದಾರೆ ಎಂಬ ಆಕ್ರೋಶದ ಮಾತು ಕೇಳಿ ಬರುತ್ತಿವೆ.

ಹೆರಕಲ್ ಬ್ಯಾರೇಜ್‌ನಿಂದ ಆನದಿನ್ನಿ ಬ್ಯಾರೇಜ್‌ ತುಂಬಿಸಿಕೊಂಡರೆ, ಆ ಯೋಜನೆಯ ಮೂಲ ಉದ್ದೇಶ ಈಡೇರುವುದಿಲ್ಲ. ಮೊದಲು ಈ ಯೋಜನೆಯ ನೀಲನಕ್ಷೆ ತಯಾರಿಸಿದ್ದೆ ನಮ್ಮ ಬಿಟಿಡಿಎ ಒಬ್ಬ ಇಂಜನಿಯರ್‌. ಈಗ ಅವರೇ ಮೂಲ ಯೋಜನೆ ಬದಲಿಸಿ, ಆನದಿನ್ನಿ ಬ್ಯಾರೇಜ್‌ ತುಂಬಲು ಯೋಜನೆ ಅಂತಿಮಗೊಳಿಸಿದ್ದಾರೆ. ಇದು ಶಾಶ್ವತ ಪರಿಹಾರವಾಗುವುದಿಲ್ಲ. ಕಾವೇರಿ ನಿಗಮ ಕೈಗೊಂಡ ಕುಡಿಯುವ ನೀರು ಪೂರೈಕೆ ಯೋಜನೆಗಳಂತೆ, ಘಟಪ್ರಭಾ ನದಿಯಲ್ಲಿ ಸೇತುವೆ ನಿರ್ಮಿಸಿ, ಪೈಪ್‌ಲೈನ್‌ ಹಾಕಿಕೊಂಡೇ, ಬಿಟಿಡಿಎನ ಡಬ್ಲುಪಿಗೆ ನೀರು ತಂದರೆ ಶಾಶ್ವತ ಪರಿಹಾರವಾಗಲಿದೆ.
•ಎಸ್‌.ಐ. ಇದ್ದಲಗಿ, ಎಇಇ, ಬಿಟಿಡಿಎ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ