Tragic: ಅಪಾರ್ಟ್ಮೆಂಟ್ನ 29ನೇ ಮಹಡಿಯಿಂದ ಜಿಗಿದು 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ
Team Udayavani, Jan 24, 2024, 12:40 PM IST
ಬೆಂಗಳೂರು: ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ವೊಂದರ 29ನೇ ಮಹಡಿಯಿಂದ ಜಿಗಿದು 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬಾಲಕಿಯ ತಂದೆ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಇತ್ತೀಚೆಗೆ ಕೆಲಸ ತೊರೆದಿದ್ದರು. ತಾಯಿ ಇತ್ತೀಚೆಗೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಹುಳಿಮಾವಿನ ಪ್ರತಿಷ್ಠಿತ ಅಪಾರ್ಟ್ಮೆಂಟ್ವೊಂದರ 29ನೇ ಮಹಡಿಯಲ್ಲಿ ಬಾಲಕಿ ಕುಟುಂಬವು ನೆಲೆಸಿತ್ತು. ಮಂಗಳವಾರ ಮುಂಜಾನೆ 5 ಗಂಟೆಗೆ ಪ್ಲ್ರಾಟ್ನ ಬಾಲ್ಕನಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹುಳಿಮಾವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮುಂಜಾನೆ ಮಗಳನ್ನು ಗಮನಿಸಿದ್ದ ತಾಯಿ: ಬಾಲಕಿಯು ಮುಂಜಾನೆ 4 ಗಂಟೆಗೆ ಎಚ್ಚರಗೊಂಡಿರುವುದನ್ನು ಆಕೆಯ ತಾಯಿ ಗಮನಿಸಿದ್ದರು. ಮಗಳ ಬಳಿ ಹೋಗಿ ಇಷ್ಟು ಬೇಗ ಏಕೆ ಎದ್ದಿರುವುದಾಗಿ ಪ್ರಶ್ನಿಸಿದ್ದರು. ನಂತರ ಬಾಲಕಿ ತನ್ನ ಕೋಣೆಗೆ ತೆರಳಿ ಮಲಗುವುದಾಗಿ ಹೇಳಿದ್ದಳು. ಇತ್ತ ತಾಯಿಯೂ ನಿದ್ದೆಗೆ ಜಾರಿದ್ದರು. ಮುಂಜಾನೆ 5 ಗಂಟೆಗೆ ಸ್ಥಳೀಯ ನಿವಾಸಿಗಳು ಬಾಲಕಿ ಪಾಲಕರಿಗೆ ವಿಚಾರ ತಿಳಿಸಿದ್ದರು. ಇತ್ತ ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡಿರುವ ಪಾಲಕರು ದಿಗ್ಭ್ರಮೆಗೆ ಒಳಗಾಗಿದ್ದಾರೆ. ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ನಿಗೂಢವಾಗಿದೆ.